ಮಸೀದೆ ಮೀನಾ ಚಾರಿಟಬಲ್ ಟ್ರಸ್ಟ್​ನಿಂದ ಕಡುಬಡವರಿಗೆ ದಿನಸಿ ವಿತರಣೆ

29Tmk_Maside_Ration_04
Published on

ತುಮಕೂರು: ಕರೊನಾ ಭೀತಿಗೆ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ನಿತ್ಯದ ದುಡಿಮೆಯಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಗೆ ಸಿಲುಕಿರುವ ಕಡುಬಡವರು, ಕೂಲಿಕಾರ್ಮಿಕರು ಹಾಗೂ ಆಟೋಚಾಲಕರ ಮನೆ, ಮನೆಗೆ ತೆರಳಿ ದಿನಬಳಕೆ ವಸ್ತುಗಳನ್ನು ವಿತರಿಸುವ ಮೂಲಕ ನಗರದ ಗೂಡ್‌ಶೆಡ್ ಕಾಲನಿಯ ಮಸೀದೆ ಮೀನಾ ಚಾರಿಟಬಲ್ ಟ್ರಸ್ಟ್ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.

ನಗರದ ಗೂಡ್‌ಶೆಡ್ ಕಾಲನಿಯ ಮಸೀದೆ ಮೀನಾ ಚಾರಿಟಬಲ್ ಟ್ರಸ್ಟ್ ಸದಸ್ಯರು ತಮ್ಮ ಬಡಾವಣೆಯಲ್ಲಿನ ಕಡುಬಡುವರು, ಕೂಲಿಕಾರ್ಮಿಕರು ಹಾಗೂ ಆಟೋಚಾಲಕರನ್ನು ಗುರುತಿಸಿ 10 ದಿನಕ್ಕಾಗುವಷ್ಟು ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ಕೈಲಾದ ಸೇವೆ ಮಾಡಿದ್ದಾರೆ. ಜಾತಿ, ಧರ್ಮವನ್ನೂ ಮೀರಿ ಸದಸ್ಯರು ಶನಿವಾರ ಒಂದೇ ದಿನ 125 ಮನೆಗಳಿಗೆ ತೆರಳಿ ಜನಸಂಖ್ಯೆಗನುಗುಣವಾಗಿ ಪದಾರ್ಥಗಳನ್ನು ವಿತರಿಸಿದ್ದಾರೆ.

10 ಕೆಜಿ ಅಕ್ಕಿ, 5 ಕೆಜಿ ಗೋದಿಹಿಟ್ಟು: ಪ್ರತೀ ಮನೆಗೆ 10 ಕೆಜಿ ಅಕ್ಕಿ, 5 ಕೆಜಿ ಗೋದಿಹಿಟ್ಟು, 1 ಕೆಜಿ ಸಕ್ಕರೆ, 1 ಕೆಜಿ ತಾಳೆಎಣ್ಣೆ, 1/4 ಕೆಜಿ ಟೀಪುಡಿ, 1 ಮೈತೊಳೆಯುವ ಸಾಬೂನು, 1 ಬಟ್ಟೆ ಒಗೆಯುವ ಸಾಬೂನಿನ ಚೀಲವನ್ನು ನೀಡಲಾಗಿದೆ. 10 ದಿನ ಅವರಿಗೆ ಯಾವುದೇ ರೀತಿಯಲ್ಲೂ ದಿನಸಿ ಪದಾರ್ಥ ಕೊಂಡುಕೊಳ್ಳುವ ಸಂಕಷ್ಟ ಎದುರಾಗದಂತೆ ಟ್ರಸ್ಟ್ ಸದಸ್ಯರು ಕ್ರಮವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಮಸೀದೆ ಮೀನಾ ಚಾರಿಟಬಲ್ ಟ್ರಸ್ಟ್ ವತಿಯಿಂದಲೇ ಉಚಿತವಾಗಿ ಎಲ್ಲರ ಮನೆಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಸೋಮವಾರ ಇನ್ನೂ 150 ಮನೆಗಳಿಗೆ ವಿತರಣೆ ಮಾಡುವಷ್ಟು ದಿನಸಿ ಪದಾರ್ಥಗಳ ಚೀಲವನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಯಾರಿಗೆ ದಿನಸಿ ಪದಾರ್ಥ ಖರೀದಿಸಲು ಸಾಧ್ಯವಿಲ್ಲವೊ ಅಂತಹವರನ್ನು ಗುರುತಿಸಿ ನೀಡಲಾಗುವುದು ಎನ್ನುತ್ತಾರೆ ಟ್ರಸ್ಟ್ ಸದಸ್ಯ ಇಮ್ರಾನ್ ಪಾಷಾ. ಟ್ರಸ್ಟ್ ಅಧ್ಯಕ್ಷ ಸೈಯದ್ ಸಾಬ್, ಉಪಾಧ್ಯಕ್ಷ ಬಾಬು, ಖಜಾಂಚಿ ಫಾರೂಕ್ ಪಾಷಾ, ಕಾರ್ಯದರ್ಶಿ ಮಹಮ್ಮದ್ ಪೀರ್, ನಿರ್ದೇಶಕರಾದ ನೂರ್ ಅಹ್ಮದ್, ಶಫಿವುಲ್ಲಾ, ಇಮ್ರಾನ್ ಪಾಷಾ, ರಿಯಾಜ್ ಸಹೋದರರು ಈ ಕಾರ್ಯವನ್ನು ಸದ್ದುಗದ್ದಲವಿಲ್ಲದೆ ಮಾಡಿಕೊಂಡು ಹೋಗುತ್ತಿದ್ದಾರೆ.

2 ವರ್ಷಗಳ ಹಿಂದೇ ನಮ್ಮ ಟ್ರಸ್ಟ್ ರಚನೆ ಆಗಿದ್ದು ಸಾಮಾಜಿಕ ಕಾರ್ಯ ಮಾಡಿಕೊಂಡು ಬಂದಿದೆ. ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಗುರುತಿಸಿ ಅಂತಹವರ ಮನೆಗಳಿಗೆ 10 ದಿನಕ್ಕಾಗುವಷ್ಟು ದಿನಸಿ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ. ಈ ಕಾರ್ಯದಲ್ಲಿ ದಾನಿಗಳು ಕೈಜೋಡಿಸಬಹುದು. ಸೈಯದ್ ಸಾಬ್ ತುಮಕೂರು ಮಸೀದೆ ಮೀನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net