

ಮಂಗಳೂರು: ದೇವಸ್ಥಾನದ ರಚನೆ ಕಂಡುಬಂದಿರುವ ಗುರುಪುರ ಬಳಿಯ ಮಳಲಿಯ ಮಸೀದಿ ಸ್ಥಳದಲ್ಲಿ ಗುರುಪುರ ಜಂಗಮ ಮಠಕ್ಕೆ ಸಂಬಂಧಿಸಿದ ಸಾನ್ನಿಧ್ಯವಿದೆ. ಅಲ್ಲಿದ್ದ ಗುರುಮಠ ಗುರುಪುರ ಮಠದ ಶಾಖೆಯಾಗಿತ್ತು ಎಂಬುದಕ್ಕೆ ದಾಖಲೆಗಳಿವೆ ಎಂದು ಮಠದ ಪೀಠಾಧಿಪತಿ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ, ದ.ಕ. ಜಿಲ್ಲೆಗಳಲ್ಲಿ 64 ವೀರಶೈವ ಲಿಂಗಾಯತ ಮಠವಿತ್ತು. ಅದರಲ್ಲಿ ಮಳಲಿ ಮಠ ಕೂಡ ಒಂದು. ಮಳಲಿಯ ಇಡೀ ಊರು ಈ ಮಠದ ಅಧೀನದಲ್ಲಿತ್ತು. ಮಳಲಿಯ ಜಾಗ ವೀರಶೈವ ಲಿಂಗಾಯತ ಪರಂಪರೆಯ ಪ್ರದೇಶ. ಅದರಲ್ಲಿ ಗೊಂದಲವಿಲ್ಲ ಎಂದರು.
ಜಾಗ ಬಿಟ್ಟು ಕೊಟ್ಟಿದ್ದೆವು: ಗುರುಪುರ ಮಠಕ್ಕೆ ಸಂಬಂಧಿಸಿದ ಒಂದು ಜಾಗವನ್ನು ಈ ಹಿಂದೆ ಮುಸಲ್ಮಾನರಿಗೆ ನೀಡಲಾಗಿತ್ತು. ಈಗ ಮಳಲಿಯಲ್ಲಿ ಮಠಕ್ಕೆ ಸಂಬಂಧಿಸಿದ ಜಾಗ ಇರುವುದು ಗೊತ್ತಾಗಿದೆ. ಹಾಗಾಗಿ ಮಳಲಿಯ ಜಾಗವನ್ನು ಗುರುಪುರ ಮಠಕ್ಕೆ ಬಿಟ್ಟುಕೊಡಬೇಕು. ಮಠ, ಸಾನ್ನಿಧ್ಯ ಅಭಿವೃದ್ಧಿಯಾದರೆ ಗುರುಪುರದ ಮಠ ಕೂಡ ಏಳಿಗೆಯಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಮಳಲಿ ಮಸೀದಿ ವಿಚಾರದಲ್ಲಿ ಹುಟ್ಟಿಕೊಂಡಿರುವ ವಿವಾದಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಳಲಿ ವಿಚಾರ ಸದ್ಯ ನ್ಯಾಯಾಲಯದಲ್ಲಿದೆ. ಜೂನ್ 3ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಆದೇಶಿಸಿದೆ. | ಅಲೋಕ್ ಕುಮಾರ್ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಾಣ ಮಾಡಿಕೊಂಡಿರುವ 36 ಸಾವಿರ ದೇಗುಲಗಳನ್ನು ಕಾನೂನುಬದ್ಧವಾಗಿ ವಶಪಡಿಸಿಕೊಳ್ಳುತ್ತೇವೆ. | ಕೆ.ಎಸ್. ಈಶ್ವರಪ್ಪ ಮಾಜಿ ಸಚಿವ
ಮಳಲಿ ದರ್ಗಾ ವಿವಾದಕ್ಕೆ ಸಂಬಂಧಿಸಿದಂತೆ ತಾಂಬೂಲ ಪ್ರಶ್ನೆ ವೇಳೆ ಸ್ಥಳದಲ್ಲಿ ದೈವ ಸಾನ್ನಿಧ್ಯ ಇರುವ ಬಗ್ಗೆ ತಿಳಿದು ಬಂದಿದ್ದು, ಇದಕ್ಕೆ ಪೂರಕ ಎಂಬಂತೆ ಇನ್ನೊಂದು ಘಟನೆ ಸುಮಾರು 8 ತಿಂಗಳ ಹಿಂದೆಯೇ ನಡೆದಿರುವುದು ಈಗ ಬೆಳಕಿಗೆ ಬಂದಿದೆ. ಮಸೀದಿ ಸಮೀಪದ ಕೋರ್ದಬ್ಬು ದೈವಸ್ಥಾನ ಜೀಣೋದ್ಧಾರ ಪ್ರಯುಕ್ತ 2021ರ ಅಕ್ಟೋಬರ್ನಲ್ಲಿ ದರ್ಶನ ಸೇವೆ ಮಾಡಲಾಗಿತ್ತು. ಈ ಸಂದರ್ಭ ದರ್ಶನ ಪಾತ್ರಿ, ‘ನನ್ನ ಸ್ಥಾನದ ಜೀಣೋದ್ಧಾರ ಪೂರ್ಣಗೊಳ್ಳುವ ಮೊದಲೇ ಇದೇ ಪರಿಸರದಲ್ಲಿ ಇರುವ ಇನ್ನೊಂದು ದೇವರ ಸಾನ್ನಿಧ್ಯವನ್ನು ತೋರಿಸಿಕೊಡುತ್ತೇನೆ’ ಎಂದು ದೈವ ನುಡಿ ಹೇಳಿದ್ದರು. ಈ ವೇಳೆ ಆಡಳಿತ ಮಂಡಳಿಗೆ ಸಂಬಂಧಪಟ್ಟವರು, ದೈವದ ಚಾಕರಿ ಮಾಡುವವರು ಮಾತ್ರ ಇದ್ದರು. ಆಗ ಅವರು ಅದನ್ನು ವಿಶೇಷವಾಗಿ ಪರಿಗಣಿಸಿರಲಿಲ್ಲ. ಆದರೆ ದರ್ಗಾ ನವೀಕರಣ ವೇಳೆ ದೇವಳದ ಮಾದರಿ ಪತ್ತೆಯಾಗುತ್ತಿದ್ದಂತೆ ದೈವದ ನುಡಿ ಮುನ್ನೆಲೆಗೆ ಬಂದಿದೆ.