

ಮಂಡ್ಯ: ತಾಲೂಕಿನ ಸಾತನೂರು ಗ್ರಾಮದಲ್ಲಿ ಶನಿವಾರ ಗ್ರಾಮದೇವತೆ ಮಸಣಮ್ಮ ದೇವಿ ಹಬ್ಬ ಸಂಭ್ರಮದಿಂದ ನಡೆಯಿತು.
ಮಹಾಲಯ ಅಮಾವಾಸ್ಯೆ ಅಂಗವಾಗಿ ಮುಂಜಾನೆಯಿಂದಲೇ ಮಸಣಮ್ಮ ದೇವಾಲಯದಲ್ಲಿ ಸಹಸ್ರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಬೇಯಿಸಿದ ಮಾಂಸ ಮತ್ತು ಅನ್ನ ವಿತರಿಸಲಾಗಿದೆ. ಈ ಹಬ್ಬದ ಸಮಯದಲ್ಲಿ ಪ್ರಾಣಿ ಬಲಿ ಕೊಡದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೂ ಕುರಿ, ಕೋಳಿಯನ್ನು ಬಲಿಕೊಟ್ಟು ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದಲ್ಲಿ ಹೊಸ ಗುಡಿ ಮತ್ತು ಹಳೇ ಗುಡಿ ಎಂಬ ಎರಡು ಮಸಣಮ್ಮ ದೇವಾಲಯಗಳಿವೆ. ಹೊಸಗುಡಿಯ ದೇವಿಯನ್ನು ಹಬ್ಬದ ಹಿಂದಿನ ದಿನದ ರಾತ್ರಿ 10ರಿಂದ ಮಧ್ಯರಾತ್ರಿವರೆಗೆ ಮೆರವಣಿಗೆ ಮಾಡಿದರೆ, ನಂತರ ಬೆಳಗಿನ ಜಾವದವರೆಗೆ ಹಳೇಗುಡಿ ದೇವಿಯನ್ನು ಮೆರವಣಿಗೆ ನಡೆಯುವುದು ಇಲ್ಲಿನ ವಿಶೇಷ. ಅದರಂತೆ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ರಾತ್ರಿ ಮಸಣಮ್ಮ ದೇವತೆಯ ಕರಗ ಮಹೋತ್ಸವ ನಡೆಯಿತು. ಅಂತೆಯೇ ರಾತ್ರಿ ಗ್ರಾಮದ ಹೊರವಲಯದ ಕೆರೆ ಬಳಿ ಜಮಾಯಿಸಿದ ನೂರಾರು ಭಕ್ತರ ಸಮ್ಮುಖದಲ್ಲಿ ಕರಗ ಉತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಿಯ ಕರಗವು ತೆಂಗಿನ ಹೊಂಬಾಳೆಯಿಂದ ಕೂಡಿರುವುದು ಇಲ್ಲಿನ ವಿಶೇಷ. ಸಾಮಾನ್ಯವಾಗಿ ದೇವರ ಕರಗಗಳಿಗೆ ಅಡಿಕೆ ಹೊಂಬಾಳೆಗಳನ್ನು ಬಳಸುವುದು ಸಂಪ್ರದಾಯ. ರಾತ್ರಿಯಿಡಿ ವಿಜೃಂಭಣೆಯಿಂದ ತೆಂಗಿನ ಹೊಂಬಾಳೆ ಉತ್ಸವ ಜರುಗಿತು. ಗ್ರಾಮದ ಕೆರೆಯ ಬಳಿ ದೇವಿಯ ಪೂಜೆ ನೆರವೇರಿಸಿ, ಪೂಜಾರಿ ತಲೆಯ ಮೇಲೆ ತೆಂಗಿನ ಹೊಂಬಾಳೆಯ ಕರಗವನ್ನು ಹೊತ್ತು ತರಲಾಯಿತು. ನೋಡುಗರಿಗೆ ಈ ದೃಶ್ಯ ರೋಮಾಂಚನಕಾರಿಯಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಗದ ಮೆರವಣಿಗೆ ನಡೆಸಿ, ಮಧ್ಯರಾತ್ರಿ 12ಕ್ಕೆ ಪೂರ್ಣಗೊಳಿಸಲಾಯಿತು. ಆ ನಂತರ ಹಳೇ ಗುಡಿಯಲ್ಲಿ ಪೂಜೆ ನೆರವೇರಿಸಿ ಮತ್ತೊಂದು ಕರಗ ಉತ್ಸವ ನಡೆಸಲಾಯಿತು. ಉತ್ಸವ ವೇಳೆ ಯುವಕರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಕೆರೆ ಬಳಿ ಬಾಯಿಬೀಗ ಮತ್ತು ದೇವರ ಉತ್ಸವ ನಡೆಯಿತು. ಎರಡೂ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.