ಮಾರ್ಕ್ಸ್‌ವಾದ ನಮ್ಮ ಬದುಕಿಗೆ ದಾರಿ ತೋರಿಸುವ ತತ್ವಶಾಸ್ತ್ರ : ಅಮಿತಾಬ್ ಚಟರ್ಜಿ ಅಭಿಮತ

SUCI
Published on

ಮೈಸೂರು: ಕಾರ್ಮಿಕ ಮುಖಂಡ ಶಿವದಾಸ್ ಘೋಷ್ ನಮಗೆ ಸತ್ಯದ ಹುಡುಕಾಟದ ದಾರಿ ತೋರಿಸಿಕೊಟ್ಟರು. ಆ ದಾರಿ ನಮಗೆ ಮಾರ್ಕ್ಸ್‌ವಾ ದದಿಂದ ದೊರೆಯುತ್ತದೆ ಎಂಬುದನ್ನು ಶಿವದಾಸ್ ಘೋಷ್ ತಿಳಿಸಿಕೊಟ್ಟಿದ್ದಾರೆ ಎಂದು ಎಸ್‌ಯುಸಿಐ(ಸಿ) ಪಾಲಿಟ್ ಬ್ಯೂರೋ ಸದಸ್ಯ ಅಮಿತಾಬ್ ಚಟರ್ಜಿ ಹೇಳಿದರು.

ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಮಿಕ ನಾಯಕ ಶಿವದಾಸ್ ಘೋಷ್ ಅವರ 48ನೇ ಸ್ಮರಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾರ್ಕ್ಸ್‌ವಾದ ವಿಜ್ಞಾನದ ಆಧಾರದ ಮೇಲೆ ರೂಪುಗೊಂಡ ತತ್ವಜ್ಞಾನವಾಗಿದೆ. ವಿಶ್ವಕ್ಕೆ ಸಂಬಂಧಿಸಿದ ಸತ್ಯವನ್ನು ಮಾರ್ಕ್ಸ್‌ವಾದದ ಮೂಲಕ ಗ್ರಹಿಸಬಹುದು. ಅದನ್ನು ನಮಗೆ ಶಿವದಾಸ್ ಘೋಷ್ ತೋರಿಸಿಕೊಟ್ಟರು ಎಂದರು.

ದೇಶದಲ್ಲಿ ದ್ವೈತ, ಅಧ್ವೈತ ಸೇರಿದಂತೆ ಹಲವು ರೀತಿಯ ತತ್ವಶಾಸ್ತ್ರಗಳು ಇವೆ. ಆದರೆ, ಆ ಎಲ್ಲ ತತ್ವಶಾಸ್ತ್ರ, ಸಿದ್ಧಾಂತಗಳು ಒಬ್ಬ ವ್ಯಕ್ತಿಗೆ ಆದಂತಹ ಅನುಭವವಾಗಿದೆ. ಆದರೆ, ಮಾರ್ಕ್ಸ್‌ವಾದ ವಿಜ್ಞಾನವನ್ನು ಆಧರಿಸಿ ತತ್ವಶಾಸ್ತ್ರವಾಗಿದೆ. ಮಾರ್ಕ್ಸ್‌ವಾದ ನಮ್ಮ ಬದುಕಿಗೆ ದಾರಿ ತೋರಿಸುವ ತತ್ವಶಾಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಯುಸಿಐ(ಸಿ) ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಎಂ.ಎನ್. ಶ್ರೀರಾಮ್ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್‌ನ ಜನ ವಿರೋಧಿ ನೀತಿಯಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾರ್ಮಿಕರು 14 ಗಂಟೆಗಳ ಕಾಲ ದುಡಿಯುವ ನೀತಿ ತರಲು ಸರ್ಕಾರ ಚಿಂತನೆ ನಡೆಸುತ್ತಿರುವುದು ಖಂಡನೀಯ. ಸರ್ಕಾರಕ್ಕೆ ಮಾನವೀಯತೆ ಬೇಡವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ರವಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net