

ರಾಣೆಬೆನ್ನೂರ: ಕಳೆದ 15 ದಿನದ ಹಿಂದೆ ಬೆಂಕಿಗಾಹುತಿಯಾಗಿ 5 ಜನ ಗಾಯಗೊಂಡು ಇಬ್ಬರು ಮೃತಪಟ್ಟ ಘಟನೆಗೆ ಕಾರಣವಾದ ಇಲ್ಲಿಯ ಮಾರುತಿ ನಗರದಲ್ಲಿರುವ ವ್ನಿೇಶ್ವರ ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಗುರುವಾರ ನಸುಕಿನ ಜಾವ ಏಕಾಏಕಿ ಸಿಡಿಮದ್ದು ಸ್ಫೋಟಗೊಂಡು ಭಾರಿ ಪ್ರಮಾಣದ ಬೆಂಕಿ ತಗುಲಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದೆ.
ಬೆಂಕಿ ಅವಘಡ ನಡೆದ ದಿನದಂದು ನಗರಸಭೆಯವರು ಹಾಗೂ ಪೊಲೀಸರು ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕಿದ್ದರು. ಆದರೆ, ಒಳಗಡೆ ಡ್ರಮ್‌ನಲ್ಲಿ ತುಂಬಿಟ್ಟಿದ್ದ ನೈಟ್ರೋ ಸೆಲೋಸಸ್ (ಸ್ಫೋಟಕವಸ್ತು) ಹಾಗಿಯೇ ಬಿಡಲಾಗಿತ್ತು. ಅದು ಗುರುವಾರ ಬೆಳಕಿನ ಜಾವ ಏಕಾಏಕಿ ಸ್ಫೋಟಗೊಂಡಿದೆ.
ಸ್ಫೋಟದ ರಭಸಕ್ಕೆ ಫ್ಯಾಕ್ಟರಿಯ ತಗಡುಗಳು ಸಂಪೂರ್ಣ ಹಾರಿ ರಸ್ತೆ ಬದಿ ಬಂದು ಬಿದ್ದಿವೆ. ಅಲ್ಲದೆ ಕಟ್ಟಡದ ಕೆಳಮಹಡಿಯ ಮನೆಗಳ ಕಿಟಕಿಯ ಗಾಜುಗಳು ಪುಡಿಪುಡಿಯಾಗಿ ಹೋಗಿವೆ. ಕಟ್ಟಡ ಕೆಲ ಭಾಗದಲ್ಲಿ ಬಿರುಕು ಬಿಟ್ಟಿದೆ. ಅದೃಷ್ಟವಶಾಹತ ಫ್ಯಾಕ್ಟರಿಗೆ ಬೀಗ ಮುದ್ರೆ ಹಾಕಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟದ ಭಯಂಕರ ಶಬ್ಧ ನಗರದ ಬಸ್ ನಿಲ್ದಾಣದವರೆಗೂ ಕೇಳಿಸಿದ್ದು, ಫ್ಯಾಕ್ಟರಿಯ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರಸಭೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ…
ಘಟನೆಗೆ ಪ್ರಮುಖವಾಗಿ ನಗರಸಭೆ ಪರಿಸರ ಇಂಜಿನಿಯರ್‌ಗಳೇ ಕಾರಣವಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಒತ್ತಾಯಿಸಿದರು.
ಘಟನಾ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಅನಧಿಕೃತ ಕಟ್ಟಡದಲ್ಲಿ ಯಾವುದೇ ಪರವಾನಗಿ ಇಲ್ಲದೆ ಫ್ಯಾಕ್ಟರಿ ನಡೆಯುತ್ತಿದ್ದರೂ ನಗರಸಭೆ ಅಧಿಕಾರಿಗಳು ಕಂಡು ಜಾಣಕುರುಡುತನ ಪ್ರದರ್ಶನ ಮಾಡಿದ್ದಾರೆ. ಇಂಥವರ ಅವರ ನಿರ್ಲಕ್ಷೃದಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 5 ಜನ ಇನ್ನೂ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಘಟನೆಗೆ ಕಾರಣವಾದ ನಗರಸಭೆ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನದಲ್ಲಿ ಅನಿವಾರ್ಯವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.