

ಮುಂಡರಗಿ: ತಾಲೂಕಿನ ಮಕ್ತುಂಪುರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ದೇವರ 18ನೇ ವರ್ಷದ ಕಾರ್ತಿಕೋತ್ಸವ ಪ್ರಯುಕ್ತ ಶನಿವಾರ ಶ್ರದ್ಧಾಭಕ್ತಿಯಿಂದ ಪೂರ್ಣ ಕುಂಭಮೇಳ, ಸಕಲ ವಾದ್ಯಮೇಳಗಳೊಂದಿಗೆ ಶ್ರೀ ಮಾರುತೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು.
ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀ ಮಾರುತೇಶ್ವರನಿಗೆ ಕುಂಕುಮ ಪೂಜೆ ನೆರವೇರಿತು. ನಂತರ ಶ್ರೀ ಮಾರುತೇಶ್ವರ ಉತ್ಸವ ಮೂರ್ತಿಯು ಹೊಳೆಗೆ ಹೋಗಿ ಅಲ್ಲಿ ಕುಂಭ ಕಳಶಗಳಿಂದ ಪೂಜೆಗೊಂಡು ಮತ್ತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂಲಕ ಸಂಚರಿಸಿ ದೇವಸ್ಥಾನ ತಲುಪಿತು. ಸಂಜೆಯು ಪಲ್ಲಕ್ಕಿ ಸೇವೆ ಜರುಗಿತು.
ನಂತರ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರಿಗೆ ಮಹಾಪ್ರಸಾದ ನಡೆಯಿತು. ರಾತ್ರಿ ಶ್ರೀ ಮಾರುತೇಶ್ವರ ವಿವಿಧೋದ್ದೇಶಗಳ ಸೇವಾ ಸಂಸ್ಥೆ ನೇತೃತ್ವದಲ್ಲಿ ಜೆ.ಪಿ. ಲ್ಯಾಂಪ್ ಯುಟ್ಯೂಬ್ ಚಾನಲ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.