ಶ್ರದ್ಧಾಭಕ್ತಿಯಿಂದ ಜರುಗಿದ ಹುತಾತ್ಮ ದಿನಾಚರಣೆ

30adarshkdga5
Published on

ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆ ನಗರದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು.


ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿಯವರ ’ಚಿತಾಭಸ್ಮ’ವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಣೆ ಮಾಡಲಾಯಿತು. ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಗಾಂಧೀಜಿಯವರ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪದಲ್ಲಿರಿಸಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು.


ಪೊಲೀಸ್ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ರಾಕೇಶ್ ಮತ್ತು ತಂಡದವರು ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ಸಿದ್ದೇಶ್‌ರವರ ನೇತೃತ್ವದಲ್ಲಿ ಪೊಲೀಸ್ ತಂಡದವರು ರಾಷ್ಟ್ರಗೀತೆ ಹಾಡಿ ಗಮನ ಸೆಳೆದರು.


ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಲಿಯಾಕತ್ ಅಲಿ ಹಾಗೂ ಸಂತ ಮೈಕಲರ ಶಾಲೆಯ ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ(ಸಂತೋಷ್ ಭಟ್), ಬೈಬಲ್(ಸಗಾಯ ಮೇರಿ), ಕುರಾನ್(ಇಸಾಕ್ ಮೌಲ್ವಿ) ಸಂದೇಶಗಳ ಪಠಣ ಮಾಡಲಾಯಿತು. ನಂತರ ಸರ್ಕಾರಿ ಗೌರವಾರ್ಪಣೆ ಹಾಗೂ ಮೌನಾಚರಣೆಯ ನಂತರ ಮೆರವಣಿಗೆಯಲ್ಲಿ ಗಾಂಧೀಜಿ ಚಿತಾಭಸ್ಮವನ್ನು ಮತ್ತೆ ಜಿಲ್ಲಾ ಖಜಾನೆಯಲ್ಲಿಟ್ಟು ಭದ್ರಗೊಳಿಸಲಾಯಿತು.


ಈ ಸಂದರ್ಭ ಸರ್ವೋದಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವುದು ಇಡೀ ರಾಷ್ಟ್ರದಲ್ಲೇ ವಿಶೇಷವಾಗಿದೆ. ಆ ಹಿನ್ನೆಲೆಯಲ್ಲಿ ನಗರದ ಗಾಂಧೀ ಮಂಟಪದಲ್ಲಿ ಚಿತಾಭಸ್ಮವಿಟ್ಟು ’ರಾಜ್‌ಘಾಟ್’ ಮಾದರಿಯಲ್ಲಿ ’ಗಾಂಧಿ ಸ್ಮಾರಕ ನಿರ್ಮಾಣ’ಕ್ಕೆ ಮುಂದಾಗಲಾಗಿದ್ದು, ಜಿಲ್ಲಾಧಿಕಾರಿರವರು ೩೦ ಸೆಂಟು ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿಗೆ ಮಾಡಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹಲವು ವರ್ಷಗಳಿಂದ ಹುತಾತ್ಮರ ದಿನಾಚರಣೆ ಆಯೋಜಿಸಿಕೊಂಡು ಬರಲಾಗಿದೆ. ಆ ನಿಟ್ಟಿನಲ್ಲಿ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿಯವರ ಸ್ಮಾರಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್, ಪೊಲೀಸ್ ಇನ್ಸ್‌ಪೆಕ್ಟರ್ ಮೇದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಂಗಧಾಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net