

ಮೈಸೂರು: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿ ಬುಧವಾರ ಹಮ್ಮಿಕೊ ಂಡಿದ್ದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಸಂದರ್ಭ ಹುತಾತ್ಮರಾದ ಅರಣ್ಯ ಇಲಾಖೆಯ 61 ಅಧಿಕಾರಿ ಗಳು ಹಾಗೂ ಸಿಬ್ಬಂದಿಗಳ ತ್ಯಾಗ ಬಲಿದಾನ ಸ್ಮರಿಸಿ ಗೌರವ ಸಲ್ಲಿಸಲಾಯಿತು.
ಕರ್ತವ್ಯ ಸಂದರ್ಭ ಮೃತಪಟ್ಟ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಸಂದರ್ಭ ನೆನೆದು ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಮೌನಾಚರಣೆ ಮಾಡುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ದೇಶ ಕಾಯುವ ಯೋಧರ ರೀತಿಯಲ್ಲಿ ಅರಣ್ಯ ರಕ್ಷಣೆ ಮಾಡುತ್ತಿರುವ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವೆ ಮಹತ್ವದ್ದು. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಪ್ರಾಣದ ಹಂಗನ್ನು ತೊರೆದು ವನ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಮುಂದಾಗುತ್ತಿದ್ದಾರೆ ಎಂದರು.
ಎಲ್ಲರಿಗೂ ಅರಣ್ಯ ಸುಂದರವಾಗಿ ಕಾಣುತ್ತದೆ. ಆ ಅರಣ್ಯವನ್ನು ಸಂರಕ್ಷಣೆ ಮಾಡುವುದು ಸುಲಭದ ವಿಚಾರವಲ್ಲ. ಅರಣ್ಯವನ್ನು ಸಂರಕ್ಷಿಸುವುದರ ಹಿಂದೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶ್ರಮ ಅಪಾರವಾದದ್ದು. ಈ ಕಾರ್ಯವನ್ನು ಅವರು ತಪಸ್ಸಿನ ರೀತಿಯಲ್ಲಿ ವರ್ಷದ ಎಲ್ಲ ದಿನವೂ ನಡೆಸುತ್ತಿರುತ್ತಾರೆ ಎಂದು ಹೇಳಿದರು.
ಅರಣ್ಯ ನಾಶ ಹಾಗೂ ವಿವಿಧ ಕಾರಣಗಳಿಂದ ಇತ್ತೀಚೆಗೆ ಮಾನವ ಹಾಗೂ ವನ್ಯಜೀವಿ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಅವಶ್ಯಕತೆ ಇದೆ. ಪರಿಸರದಲ್ಲಿರುವ ಪ್ರತಿಯೊಂದು ಗಿಡ-ಮರವೂ ತನ್ನದೇ ಆದ ಮಹತ್ತರ ಪಾತ್ರ ವಹಿಸುತ್ತಿದೆ. ಅವುಗಳನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಅರಣ್ಯ ಇಲಾಖೆಯ ವರ್ಕಿಂಗ್‌ಪ್ಲಾನ್ ಸಿಎಫ್ ರವಿಶಂಕರ್ ಮಾತನಾಡಿ, ಜಗತ್ತಿನಲ್ಲಿ ಎಲ್ಲ ಪ್ರಾಣಿಗಳು ಒಂದಕ್ಕೊಂದು ಹೊಂದಿಕೊಂಡು ಸಮತೋಲನದಿಂದ ಜೀವನ ನಡೆಸುತ್ತಿವೆ. ಪರಿಸರ ಸಮತೋಲನದಿಂದ ಇರಬೇಕಾದರೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಬೆಳವಣಿಗೆ ಹೊಂದಿದರೂ ಜನರಿಗೆ ಉಸಿರಾಡಲು, ಜೀವನ ಸಾಗಿಸಲು ಅರಣ್ಯ ಅವಶ್ಯಕ. ಗಾಳಿ, ನೀರು, ಆಹಾರ, ಕೃಷಿ, ಕೈಗಾರಿಕೆ ಸೇರಿದಂತೆ ಮೂಲಭೂತ ಅವಶ್ಯಕತೆಗಳು ಅರಣ್ಯಗಳನ್ನೇ ಅವಲಂಬಿಸಿವೆ ಎಂದರು.
ಜಾಗತಿಕ ಹವಾಮಾನ ಬದಲಾವಣೆ ತಡೆಗಟ್ಟಲು ಏಕೈಕ ಮಾರ್ಗ ಅರಣ್ಯ ಸಂರಕ್ಷಣೆಯೇ ಆಗಿದೆ. ವಿಶ್ವದ 36 ಜೀವ ವೈವಿಧ್ಯದ ತಾಣಗಳಲ್ಲಿ ಭಾರತದಲ್ಲಿನ ಮೂರು ತಾಣವೂ ಸೇರಿದೆ. ಪಶ್ಚಿಮ ಘಟ್ಟಗಳು, ಹಿಮಾಲಯ ಹಾಗೂ ಇಂಡೋ-ಬರ್ಮಾ ಕಾಡುಗಳು ಒಳಗೊಂಡಿವೆ. ದೇಶದಲ್ಲಿ 1.73 ಲಕ್ಷ ಅರಣ್ಯ ಅವಲಂಬಿತ ಗ್ರಾಮಗಳಿವೆ. ಈ ಗ್ರಾಮಗಳ ಜನರೊಂದಿಗೆ ಬಾಂಧವ್ಯ ಇಟ್ಟುಕೊಂಡು ಅರಣ್ಯ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಕಾಡ್ಗಿಚ್ಚು, ವನ್ಯಜೀವಿಗಳ ಕಳ್ಳಬೇಟೆ, ಒತ್ತುವರಿ ಸೇರಿದಂತೆ ಪರಿಸರ ನಾಶವನ್ನು ತಡೆಗಟ್ಟುವ ಹಾಗೂ ವೃಕ್ಷ ಕವಚ ಹೆಚ್ಚಿಸುವ ಕೆಲಸದಲ್ಲಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈ ಶ್ಲಾಘನೀಯ ಕಾರ್ಯಕ್ಕೆ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಡಿಸಿಎಫ್ ಡಾ.ಕೆ.ಎನ್.ಬಸವರಾಜ್ ಮಾತನಾಡಿ, 1730ರ ಸೆ. 11ರಂದು ಜೋಧಪುರದ ಮಹಾರಾಜ ಅಭಯಸಿಂಗ್‌ನ ಸೈನಿಕರು ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಯ ಪೀಠೋಪಕರಣಗಳಿಗಾಗಿ ಕಡಿಯಲು ಮುಂದಾದರು. ಇದನ್ನು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಜನರನ್ನು ಹತ್ಯೆ ಮಾಡಲಾಯಿತು. ಮರಗಳಿಗಾಗಿ ಬಲಿದಾನ ಮಾಡಿದ ಇವರ ನೆನಪಿಗೆ ಸೆ.11ರಂದು ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಮಾತನಾಡಿ, ಮಾನವನ ದುರಾಸೆಯ ಪರಿಣಾಮ ಇಂದು ಅರಣ್ಯ ನಾಶವಾಗುತ್ತಿದೆ. ಜನ ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಕರ್ತವ್ಯಗಳನ್ನು ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಿನ ಪೀಳಿಗೆಗೆ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಭೂಪಟದ ಶೇ.33ರಷ್ಟು ಅರಣ್ಯ ಇರಬೇಕು ಎಂಬ ನಿಯಮವಿದೆ. ಆದರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಶೇ.21ರಷ್ಟು ಮಾತ್ರ ಅರಣ್ಯವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೀವ ವೈವಿಧ್ಯತೆ ಸಂರಕ್ಷಣೆ, ಕಾಡ್ಗಿಚ್ಚು ತಡೆ, ಕಳ್ಳಬೇಟೆ ತಡೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಡಿಸಿಎಫ್‌ಗಳಾದ ಡಾ.ಐ.ಬಿ.ಪ್ರಭುಗೌಡ, ಚಂದ್ರಶೇಖರ್ ಪಾಟೀಲ್, ಶಂಕರೇಗೌಡ ಹಾಗೂ ಇತರರು ಇದ್ದರು.