

ನರಗುಂದ: ದೇಶಕ್ಕಾಗಿ ಮಡಿದ ಮಹನೀಯರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಬೆಳಗಾವಿಯ ಐಟಿಬಿಪಿ ಯೋಧ ಎಸ್.ಐ. ಅಮರಚಂದಸಾಬ ಹೇಳಿದರು.
ಉತ್ತರಾಖಂಡ ಜಲಪ್ರಳಯದಲ್ಲಿ ಹುತಾತ್ಮರಾದ ತಾಲೂಕಿನ ಜಗಾಪೂರ ಗ್ರಾಮದ ವೀರಯೋಧ ಬಸವರಾಜ ತುಳಸಪ್ಪ ಯರಗಟ್ಟಿ ಅವರ 10ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ದೇಶ ಸೇವೆಗಾಗಿ ಯುವಶಕ್ತಿ ಏನು ಬೇಕಾದರೂ ಮಾಡಬಹುದು ಎಂಬುವುದಕ್ಕೆ ಬಸವರಾಜ ಯರಗಟ್ಟಿ ಅವರೇ ಸಾಕ್ಷಿ. ಕೇವಲ 21ನೇ ವಯಸ್ಸಿಗೆ ಇಂಡಿಯನ್ ಟಿಬೆಟಿಯನ್ ಬಾರ್ಡ್‌ರ್ ಸೆಕ್ಯೂರಿಟಿ ಫೋರ್ಸ್‌ಗೆ ಸೇರಿದ್ದ ಬಸವರಾಜ ಅವರು 2013ರಲ್ಲಿ ಸಂಭವಿಸಿದ ಕೇದಾರನಾಥ ಜಲಪ್ರಳಯದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುತ್ತಿರುವಾಗ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರು ಎಂದಿಗೂ ಮನದಲ್ಲಿ ಅಜರಾಮರ ಎಂದರು.
ಬಸವರಾಜ ಅವರ ಸ್ಮರಣಾರ್ಥ ಗ್ರಾಮದಲ್ಲಿ ನಿರ್ಮಿಸಿರುವ ಸ್ಮಾರಕ ಭವನ ಅಪೂರ್ಣಗೊಂಡಿದೆ. ಈ ಬಗ್ಗೆ ಗದಗ ಜಿಲ್ಲಾಡಳಿತಕ್ಕೆ ಈಗಾಗಲೇ ಮನವಿ ಮಾಡಿದ್ದು, ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ಎಂದರು.
ಐಟಿಬಿಪಿ ಯೋಧರಿಂದ ತಂದೆ ತುಳಸಪ್ಪ, ಪತ್ನಿ ಯಲ್ಲವ್ವ ಅವರನ್ನು ಸನ್ಮಾನಿಸಲಾಯಿತು. ಐಟಿಬಿಪಿ ಹೆಡ್ ಕಾನ್‌ಸ್ಟೇಬಲ್ ರಾಜೇಸಾಬ ನದಾಫ ಮಾತನಾಡಿದರು. ಹುತಾತ್ಮ ಯೋಧನ ತಾಯಿ ಗಿರಿಜವ್ವ, ಸಹೋದರಿ ಮಂಜುಳಾ, ಗ್ರಾಪಂ ಸದಸ್ಯರಾದ ಬಸವರಡ್ಡಿ ಕಾಮರಡ್ಡಿ, ಶಾಂತವ್ವ ದೇವಕ್ಕಿ, ರೇಣವ್ವ ಜೋಗಣ್ಣವರ, ನಿರ್ಮಲಾ ಸತರಡ್ಡಿ, ವಿಜಯಲಕ್ಷ್ಮೀ ಕುರ್ಲಗೇರಿ ಇತರರು ಉಪಸ್ಥಿತರಿದ್ದರು.