ಬಲಿದಾನದ ಮೂಲಕ ಜನರಲ್ಲಿ ಹೋರಾಟದ ಕಿಡಿ ಹಚ್ಚಿದ ಹುತಾತ್ಮ ಭಗತ್ ಸಿಂಗ್ , ರಾಜಗುರು, ಸುಖದೇವ್: ಟಿ.ಆರ್.ಸುನೀಲ್

11
Published on

ಮೈಸೂರು: ಸಮಸಮಾಜ ಹಾಗೂ ದೇಶದ ಸ್ವಾತಂತ್ರೃದ ಕನಸು ಕಂಡಿದ್ದ ಧೀರ, ಹುತಾತ್ಮ ಭಗತ್ ಸಿಂಗ್ ಮತ್ತು ರಾಜಗುರು, ಸುಖದೇವ್ ಅವರು ಬ್ರಿಟಿಷರ ವಿರುದ್ಧ ಹೋರಾಟದ ಕಿಡಿ ಹೆಚ್ಚಿಸಿದರು ಎಂದು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಟಿ.ಆರ್.ಸುನೀಲ್ ಹೇಳಿದರು.
ಹುತಾತ್ಮ ದಿನಾಚರಣೆ ಅಂಗವಾಗಿ ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್ ಸಂಘಟನೆಗಳಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ರಾಜಿ ರಹಿತ ಹೋರಾಟವನ್ನು ಕಟ್ಟಿ, ಸಮ ಸಮಾಜದ ನಿರ್ಮಾಣಕ್ಕಾಗಿ ಕನಸು ಕಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ ಭಗತ್ ಸಿಂಗ್, ಅವರ ಜತೆಗಾರರಾದ ರಾಜಗುರು ಮತ್ತು ಸುಖದೇವ್ ಅವರು ಬಲಿದಾನದ ಮೂಲಕ ಜನರಲ್ಲಿ ಹೋರಾಟದ ಕಿಡಿ ಹೆಚ್ಚಾಗುವಂತೆ ಮಾಡಿದರು ಎಂದರು.
ಇದು ವರ್ಗ ವಿಭಜಿತ ಸಮಾಜವಾಗುತ್ತಿದ್ದು, ಶ್ರೀಮಂತರು, ಬಡವರು, ರೈತ ಕಾರ್ಮಿಕರನ್ನು ಶೋಷಿಸಿ ಬದುಕುತ್ತಾರೆ. ಈ ಶೋಷಣೆ ವಿರುದ್ಧ ಸಮ ಸಮಾಜ ಸ್ಥಾಪನೆಯಾಗಬೇಕು. ನಮಗೆ ಸ್ವಾತಂತ್ರ್ಯ ಬೇಕಿರುವುದು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಮಾತ್ರ ಅಲ್ಲ. ಬದಲಿಗೆ ಮಾನವನಿಂದ ಮಾನವನ ಶೋಷಣೆ ಅಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷ ನಿತಿನ್ ಮಾತನಾಡಿ, ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರು ಅಂದು ಜಡವಾಗಿ ಮಲಗಿದ್ದಂತಹ ವಿದ್ಯಾರ್ಥಿ ಯುವ ಜನರನ್ನು ಬಡಿದು ಎಬ್ಬಿಸಿದರು. ಭಗತ್‌ಸಿಂಗ್ ಅವರ ವಿಚಾರ ಇವತ್ತಿಗೂ ಬಹಳ ಪ್ರಸ್ತುತವಾಗಿದ್ದು, ಅದನ್ನು ಅರಿಯುವುದು ಇಂದಿನ ವಿದ್ಯಾರ್ಥಿ, ಯುವ ಜನರಿಗೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.
ಪದಾಧಿಕಾರಿ ನೀತು ಶ್ರೀ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸೀಮಾ, ಸುಮಾ, ಚಂದ್ರಕಲಾ, ನಿತಿನ್, ಸ್ವಾತಿ, ಅಂಜಲಿ, ಹೇಮಲತಾ, ಪುಷ್ಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net