ಅಂಧರಿಗೆ ಸಮರ ಕಲೆ ರಕ್ಷಣೆ

karate-athlete-with-red-belt-posing-closeup_23-2148990932
Published on

ಅವಿನಾಶ್ ಜೈನಹಳ್ಳಿ ಮೈಸೂರು

ಸಮರ ಕಲೆ (ಮಾರ್ಷಲ್ ಆರ್ಟ್) ಕಲಿಸುವ ಮೂಲಕ ಅಂಧ ವಿದ್ಯಾರ್ಥಿನಿಯರ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಹೊಸತೊಂದು ಪ್ರಯತ್ನಕ್ಕೆ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆ ಮುಂದಡಿ ಇಟ್ಟಿದೆ.

ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯಲ್ಲಿ ಪ್ರೌಢಶಾಲೆಯ 60 ವಿದ್ಯಾರ್ಥಿನಿಯರು ಕಳೆದ ಐದು ತಿಂಗಳಿನಿಂದ ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ. ಇವರಿಗೆ ಒಸಕಾಯ್ ಮಾರ್ಷಲ್ ಆರ್ಟ್ ಆ್ಯಂಡ್ ಫಿಟ್‌ನೆಸ್ ಸೆಂಟರ್‌ನ ಡಾ.ಕೃಷ್ಣಮೂರ್ತಿ ಅವರು ತರಬೇತಿ ನೀಡುತ್ತಿದ್ದಾರೆ. ಪ್ರತಿ ಶನಿವಾರ ಮಧ್ಯಾಹ್ನದ ನಂತರ ಸುಮಾರು ಎರಡು ಗಂಟೆಗಳ ಕಾಲ ತರಬೇತಿ ನಡೆಯುತ್ತಿದೆ.

ಮಾರ್ಷಲ್ ಆರ್ಟ್‌ನ ತಂತ್ರಗಳಾದ ಮಿಡ್ಲ್ ಪಂಚ್, ಎಲ್ಬೋ ಸ್ಟ್ರೈಕ್, ನೀ ಕಿಕ್, ಕಾರ್ಟ್‌ವಿಲ್, ಫ್ರಂಟ್ ರೋಲ್, ಸೆಲ್ಫ್ ಡಿಫೆನ್ಸ್, ಹಮ್ಮರ್ ಫಿಸ್ಟ್ , ಟೈಲ್ ಬ್ರೇಕಿಂಗ್ ಸೇರಿದಂತೆ ಇನ್ನೂ ಹಲವಾರು ತಂತ್ರಗಳನ್ನು ವಿದ್ಯಾರ್ಥಿನಿಯರು ಕರಾರುವಕ್ಕಾಗಿ ಮಾಡುತ್ತಾರೆ. ವಿದ್ಯಾರ್ಥಿನಿಯರು ಓಡಿ ಬಂದು ಪಲ್ಟಿ ಎಸೆಯುವುದನ್ನು ಗಮನಿಸಿದರೆ ‘ಕಾಣು’ವರಿಗಿಂತ ನೂರು ಪಟ್ಟು ಉತ್ತಮ ಎನ್ನಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಸಮರ ಕಲೆಯಲ್ಲಿ ವಿದ್ಯಾರ್ಥಿನಿಯರು ತನ್ಮಯರಾಗಿದ್ದಾರೆ.

ತಾವು ಕಲಿತಿರುವ ಸಮರ ಕಲೆಯನ್ನು ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶನ ಮಾಡಿ ಎಲ್ಲ ಪಾಲಕರಿಂದ ಮುಕ್ತಕಂಠ ಶ್ಲಾಘನೆಯ ಗರಿಯನ್ನು ತೊಡಿಸಿಕೊಂಡಿದ್ದಾರೆ. ಅಲ್ಲದೆ, ಕರ್ನಾಟಕ ಪೊಲೀಸ್ ಅಕಾಡೆಮಿಗೂ ಹೋಗಿ ಅಲ್ಲಿ ತರಬೇತಿ ನಿರತ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಮುಂದೆ ಮಾರ್ಷಲ್ ಆರ್ಟ್ ಪ್ರದರ್ಶನ ಮಾಡಿ ಎಲ್ಲರಿಂದಲೂ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ.

ಆತ್ಮವಿಶ್ವಾಸ ಜತೆಗೆ ಭಯಮುಕ್ತ ಮನಸ್ಥಿತಿ

ನೂತನ ತಂತ್ರಜ್ಞಾನಗಳು ಆವಿಷ್ಕಾರವಾಗಿರುವುದರಿಂದ ಅಂಧ ವಿದ್ಯಾರ್ಥಿಗಳು ಈಗಂತೂ ಮಾಮೂಲಿ ವಿದ್ಯಾರ್ಥಿಗಳಂತೆ ಕಲಿಕೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಆ್ಯಪ್‌ಗಳನ್ನು ಬಳಸಿ ಉತ್ಕೃಷ್ಟ ಮಟ್ಟದಲ್ಲಿ ಅಧ್ಯಯನವನ್ನೂ ಮಾಡಬಹುದಾಗಿದೆ. ಆದರೆ ಓದನ್ನು ಹೊರತು ಪಡಿಸಿ ಅವರಿಗೆ ಸಾಮಾಜಿಕ ಜೀವನದಲ್ಲಿ, ನಿತ್ಯದ ಬದುಕಿನಲ್ಲಿ ಸದೃಢವಾಗಿ ಬದುಕು ಕಟ್ಟಿಕೊಳ್ಳಲು ಅತ್ಮವಿಶ್ವಾಸ ಬೇಕೇ ಬೇಕು. ಜತೆಗೆ ಭಯಮುಕ್ತ ಮನಸ್ಥಿತಿ ಇರಬೇಕು. ಈ ಕಾರಣದಿಂದಾಗಿ ನಮ್ಮ ಶಾಲೆಯ ವಿದ್ಯಾರ್ಥಿನಿಯರಿಗೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಕೊಡಿಸಲಾಗುತ್ತಿದೆ ಎನ್ನುತ್ತಾರೆ ಶಾಲೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹರೀಶ್.

ಮೊದಲು ನೋವಾಗುತ್ತಿತ್ತು

ಮೊದಲ ಒಂದೆರೆಡು ವಾರ ಕಲಿಯುವಾಗ ಕಾಲು-ಕೈ ಎಲ್ಲವೂ ನೋಯುತ್ತಿದ್ದವು. ಆಮೇಲೆ ಎಲ್ಲವೂ ಸರಿಯಾಯಿತು. ಈಗ ನಾವು ಸಮರಕಲೆಯನ್ನು ಖುಷಿಯಿಂದ ಕಲಿಯುತ್ತಿದ್ದೇವೆ. ನಮ್ಮಲ್ಲಿ ಭಯ ಎನ್ನುವುದು ಹೊರಟು ಹೋಗಿದೆ. ಆತ್ಮವಿಶ್ವಾಸ ವೃದ್ಧಿಯಾಗಿದೆ. ಇದರೊಂದಿಗೆ ನಮಗೆ ಅಪಾಯವಾಗುವ ಸಂದರ್ಭಗಳು ಬಂದರೆ ಎದುರಿಸುವ ಧೈರ್ಯ ಬಂದಿದೆ. ಮುಂದೆಯೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮರಕಲೆಯನ್ನು ಕಲಿಯಬೇಕು ಎನ್ನುವ ಉಮೇದಿ ಹುಟ್ಟಿದೆ ಎಂದು ತರಬೇತಿಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರು ಒಕ್ಕೂರಲಿನಿಂದ ಖುಷಿಯನ್ನು ವ್ಯಕ್ತಪಡಿಸುತ್ತಾರೆ.

ಸಾಮಾನ್ಯರಿಗೆ ಮಾರ್ಷಲ್ ಆರ್ಟ್ ಹೇಳಿಕೊಡುವುದಕ್ಕೂ ಅಂಧರಿಗೆ ಹೇಳಿಕೊಡುವುದಕ್ಕೂ ಬಹಳ ವ್ಯತ್ಯಾಸವಿದೆ. ಜತೆಗೆ ಸವಾಲಿನ ಕೆಲಸ ಕೂಡ ಆಗಿದೆ. ಅಂಗವಿಕಲರಿಗೆ ಎಲ್ಲವನ್ನೂ ಮೊದಲಿಗೆ ಸ್ಪರ್ಶದ ಮೂಲಕವೇ ಶುರು ಮಾಡಿಸಬೇಕು. ಪಂಚ್ ಮಾಡುವುದನ್ನು ಹೇಳಿಕೊಡಬೇಕಾದರೇ ಎದುರಿಗೆ ನಿಂತಿರುವ ವ್ಯಕ್ತಿಯ ವರ್ಣನೆ ಮಾಡಿದ ಬಳಿಕ, ಪಂಚ್ ಮಾಡಬೇಕಾದವರು ವ್ಯಕ್ತಿಯನ್ನು ಸ್ಪರ್ಶಿಸಿ ನಂತರ ಮುಂದುವರಿಯುತ್ತಿದ್ದರು. ಹೆಂಚನ್ನು ಒಡೆಯುವ ಸಮಯದಲ್ಲೂ ಹೆಂಚನ್ನು ಮುಟ್ಟಿ-ತಟ್ಟಿ ನೋಡಿದ ಬಳಿಕ, ಅದರ ಬಗ್ಗೆ ಮಾಹಿತಿಯನ್ನು ನೀಡಿ ಅವರನ್ನು ತರಬೇತಿಗೆ ಅನುವುಗೊಳಿಸಬೇಕಾಗಿತ್ತು ಎಂದು ವಿದ್ಯಾರ್ಥಿನಿಯರಿಗೆ ಸಮರಕಲೆಯನ್ನು ಹೇಳಿಕೊಡುತ್ತಿರುವ ಗುರು ಡಾ.ಕೃಷ್ಣಮೂರ್ತಿ ಹೇಳುತ್ತಾರೆ.

ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯಲ್ಲಿ ಪ್ರೌಢಶಾಲೆಯ 60 ವಿದ್ಯಾರ್ಥಿನಿಯರು ಕಳೆದ ಐದು ತಿಂಗಳಿನಿಂದ ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ. ಪ್ರತಿ ಶನಿವಾರ ಮಧ್ಯಾಹ್ನದ ನಂತರ ಸುಮಾರು ಎರಡು ಗಂಟೆಗಳ ಕಾಲ ತರಬೇತಿ ನಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಹೇಳಿಕೊಡುತ್ತ ನಾನೂ ಅವರ ಭಾಷೆಯನ್ನು ಕಲಿತುಕೊಂಡೆ. ಅವರಿಗೆ ಹೇಗೆ ಹೇಳಿದರೆ ಅರ್ಥವಾಗುತ್ತದೆ ಎನ್ನುವುದನ್ನು ಅರಿತುಕೊಂಡು ಅವರಲ್ಲಿ ನಾನೂ ಒಬ್ಬನಾಗಿ ತರಬೇತಿಯನ್ನು ನೀಡಲು ಶುರು ಮಾಡಿದೆ. ಈಗ ಆ ಮಕ್ಕಳಿಗೆ ಆತ್ಮವಿಶ್ವಾಸ ಮನೆ ಮಾಡಿದೆ. ಧೈರ್ಯ ಬಂದಿದೆ. ಕಲಿಸಿದ್ದಕ್ಕೂ ನನಗೂ ಸಾರ್ಥಕ ಭಾವನೆ ಮೂಡಿದೆ. ಡಾ.ಕೃಷ್ಣಮೂರ್ತಿ ಸಮರಕಲೆಯ ಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net