

ಮಂಗಳೂರು: ಮಂಗಳೂರಿನಲ್ಲೂ ಕೋವಿಡ್ ಮಾರ್ಗಸೂಚಿ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರ್ಷಲ್‌ಗಳ ಮಾದರಿಯಲ್ಲಿ ಗೃಹರಕ್ಷಕರನ್ನು ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ತೀವ್ರವಾಗಿ ಕೋವಿಡ್ ಹಬ್ಬಬಹುದಾದ ಸಾಧ್ಯತೆ ಇರುವ ಜಿಲ್ಲೆಗಳಲ್ಲೊಂದಾದ ದಕ್ಷಿಣ ಕನ್ನಡದಲ್ಲಿ ನಿಯಂತ್ರಣ ಕಾರ್ಯಕ್ರಮದಡಿ ನಡೆಯುವಂತಹ ಕಾರ್ಯಕ್ರಮಗಳ ಮೇಲೆ ಇನ್ನು ಮುಂದೆ ಗೃಹರಕ್ಷಕರು ನಿಗಾ ಇರಿಸಲಿದ್ದಾರೆ. ಸಾರ್ವಜನಿಕ ಕಾರ್ಯಕ್ರಮ, ಬಸ್, ಮಾಲ್ ಮುಂತಾದೆಡೆ ಪರಸ್ಪರ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವುದು ಅಲ್ಲದೆ ನಿಯಮ ಉಲ್ಲಂಘಿಸಿದರೆ ದಂಡ ಹಾಕುವ ಬಗ್ಗೆಯೂ ಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಎರಡನೇ ಡೋಸೇಜ್ ಹಾಕಿಸಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಆರಂಭದಲ್ಲಿ ಮಂಗಳೂರಿನಲ್ಲಿ ಈ ವಿಧಾನ ಅನುಸರಿಸುತ್ತೇವೆ, ಬಳಿಕ ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. ಜನರಿಗೆ 2020ರಲ್ಲಿ ಕೋವಿಡ್ ಬಗ್ಗೆ ಇದ್ದ ಭಯ ಈಗ ಇಲ್ಲ. ನಿರ್ಲಕ್ಷೃದಿಂದ ಕೋವಿಡ್ ಮತ್ತೆ ಹೆಚ್ಚಾಗುವ ಭೀತಿ ಎದುರಾಗಿದೆ. ಕಲ್ಯಾಣ ಮಂಟಪ, ಸಮಾವೇಶ ನಡೆಯುವ ಸ್ಥಳದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು, ಸೂಚನೆ ಧಿಕ್ಕರಿಸಿದರೆ ಅಂತಹವರ ವಿರುದ್ಧ ದಂಡ ವಿಧಿಸುವುದು ಅನಿವಾರ್ಯ ಎಂದು ತಿಳಿಸಿದರು.
ದೇವಸ್ಥಾನ ಸಿಬ್ಬಂದಿಗೂ ಲಸಿಕೆ: ದೇವಸ್ಥಾನಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ ಸಿಬ್ಬಂದಿ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ. ಅವರನ್ನೂ ಕೋವಿಡ್ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ಹಾಕಿಸಲಾಗುವುದು. 500 ದೇವಸ್ಥಾನದ 1000ಕ್ಕೂ ಹೆಚ್ಚು ಸಿಬ್ಬಂದಿಗೆ ಲಸಿಕೆ ಹಾಕಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವೃದ್ಧಾಶ್ರಮ ಅಥವಾ ಆಶ್ರಯ ತಾಣಗಳಲ್ಲಿರುವ 60 ವರ್ಷ ಮೇಲ್ಪಟ್ಟವರು 30ಕ್ಕಿಂತ ಹೆಚ್ಚು ಮಂದಿ ಇದ್ದಲ್ಲಿ ಅವರನ್ನು ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಲಸಿಕಾ ಕೇಂದ್ರಗಳಿಗೆ ಕರೆಸಿಕೊಂಡು ಲಸಿಕೆ ಒದಗಿಸಲಾಗುವುದು ಎಂದರು.
ಶೀಘ್ರವೇ ಹೊಸ ಮಾರ್ಗಸೂಚಿ: ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಹೊಸ ಮಾರ್ಗಸೂಚಿ ಹೊರಡಿಸಲಾಗುವುದು. ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ, ದಂಡ ವಿಧಿಸುವ ಪ್ರಕ್ರಿಯೆ ನಡೆಸುವ ಅಗತ್ಯವಿದೆ. ಗಡಿ ಪ್ರದೇಶಗಳಲ್ಲಿ ನಿತ್ಯ ಓಡಾಡುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಅನಗತ್ಯವಾಗಿ ಸಂಚರಿಸುವವರ ಮೇಲೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೈಸ್ಕೂಲ್‌ಗೂ ಹತ್ತಿರವಾಯ್ತು ಕೋವಿಡ್ ಸೋಂಕು
ಮಂಗಳೂರು: ಇದುವರೆಗೆ ದ.ಕ. ಜಿಲ್ಲೆಯ ನಾನಾ ಕಡೆಗಳಲ್ಲಿ, ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜುಗಳಲ್ಲಿ ಕಾಣಿಸಿದ ಕರೋನಾ ಸೋಂಕು ಈಗ ಹೈಸ್ಕೂಲ್ ಮೆಟ್ಟಿಲು ತಲುಪಿದೆ. ಮಂಗಳೂರಿನ ಸರ್ಕಾರಿ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ಕಾಲೇಜುಗಳ ಒಂದೆರಡು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿದೆ. ಇವರಲ್ಲಿ ಹೆಚ್ಚಿನವರು ಕೇರಳದಿಂದ ಆಗಮಿಸುವವರು. ಇವರ ಸಂಪರ್ಕದಲ್ಲಿ ಇರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿದೆ. ಹಾಗಾಗಿ ಸೋಂಕಿತ ವ್ಯಕ್ತಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ.
ಸೋಂಕಿತರು ತಮ್ಮ ಪ್ರಾಥಮಿಕ ಸಂಪರ್ಕದ ಬಗ್ಗೆ ಕೂಲಂಕಷ ಮಾಹಿತಿ ನೀಡಿದರೆ, ಆರೋಗ್ಯ ಇಲಾಖೆಗೆ ಪತ್ತೆಕಾರ್ಯ ನಡೆಸಲು ಸುಲಭವಾಗುತ್ತದೆ. ಸೋಂಕಿತರ ಸಂಪರ್ಕಿತರನ್ನು ನಿಗಾದಲ್ಲಿ ಇರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದರು.
ಮೂರು ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್: ಕೋವಿಡ್ ಸೋಂಕು ಪತ್ತೆಯಾದರೂ ಸೂಕ್ತ ಕ್ರಮ ಕೈಗೊಳ್ಳದ ಹಾಗೂ ಕಂಟೇನ್ಮೆಂಟ್ ಜೋನ್‌ನಲ್ಲಿದ್ದ ಇತರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಮಂಗಳೂರಿನ ಮೂರು ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾ ಆರೋಗ್ಯ ಇಲಾಖೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಈ ಬಗ್ಗೆ ಸೂಕ್ತ ಸಮಜಾಯಿಸಿ ನೀಡದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಕೋವಿಡ್ ಪತ್ತೆಯಾದ ವಿದ್ಯಾರ್ಥಿಗಳ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ, ಕೋವಿಡ್ ಪತ್ತೆಯಾದರೂ ಕೋವಿಡ್ ನಿಯಮಾವಳಿ ಪಾಲಿಸದ ಕಾಲೇಜುಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ನಿಮ್ಮ ಮೇಲೆ ಯಾಕೆ ಕ್ರಿಮಿನಲ್ ಕೇಸ್ ದಾಖಲಿಸಬಾರದು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಡಾ.ಬಾಯರಿ ತಿಳಿಸಿದ್ದಾರೆ.
ದ.ಕ. 64, ಉಡುಪಿ 38 ಮಂದಿಗೆ ಸೋಂಕು: ದ.ಕ ಜಿಲ್ಲೆಯಲ್ಲಿ ಕರೊನಾ ಏರುಗತಿಯಲ್ಲೇ ಮುಂದುವರಿದಿದ್ದು, ಗುರುವಾರ 64 ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣ ಸಂಖ್ಯೆ 34999 ತಲುಪಿದ್ದು ಸಕ್ರಿಯ ಪ್ರಕರಣಗಳು 428ಕ್ಕೇರಿವೆ. 14 ಮಂದಿ ಗುರುವಾರ ಸೋಂಕು ಮುಕ್ತರಾಗಿದ್ದು ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 33830. ಉಡುಪಿ ಜಿಲ್ಲೆಯಲ್ಲಿ ಗುರುವಾರ 38 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಸಕ್ರಿಯ ಪ್ರಕರಣ 140ಕ್ಕೆ ಏರಿಕೆಯಾಗಿದೆ. 4 ಮಂದಿ ಆಸ್ಪತ್ರೆಯಲ್ಲಿ ಹಾಗೂ 34 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಗುಣಮುಖರಾಗಿದ್ದಾರೆ.
5 ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ: ಉಡುಪಿ: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಪರಿಸರದಲ್ಲಿ ಮಾ.11ರಿಂದ 17ರವರೆಗೆ 71 ವಿದ್ಯಾರ್ಥಿಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಜಿಲ್ಲಾಡಳಿತ ಬುಧವಾರ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದೆ. ಈ ಪ್ರದೇಶ 227 ಮನೆಗಳು, 45 ಅಂಗಡಿಗಳನ್ನು ಹೊಂದಿದ್ದು, 7100 ಜನರಿದ್ದಾರೆ. ಬಫರ್ ರೆನ್ ಪ್ರದೇಶದಲ್ಲಿ 515 ಮನೆಗಳು, 640 ಅಂಗಡಿಗಳು, 62 ಕಚೇರಿಗಳಿದ್ದು, 2060 ಮಂದಿ ವಾಸಿಸುತ್ತಿದ್ದಾರೆ. 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಮಣಿಪಾಲ ಸುತ್ತಮುತ್ತಲ ಪ್ರದೇಶದಲ್ಲಿರುವ ಎಲ್ಲ ಅಂಗಡಿಗಳು, ಶಾಂಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.