

ಹೊಳೆನರಸೀಪುರ : ಆತ್ಮರಕ್ಷಣೆಗೆ ಸಮರಕಲೆ ತರಬೇತಿ ಅಗತ್ಯ ಎಂದು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಹೇಳಿದರು.
ಸ್ಕ್ವಾಯ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾ ಪಟುಗಳನ್ನು ಸನ್ಮಾನಿಸಿ ಮಾತನಾಡಿದರು.
ಮಹಿಳೆಯರು ಹಾಗೂ ಯುವತಿಯರಿಗೆ ಹಲವೆಡೆ ಕಿರುಕುಳ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಮಾರ್ಷಲ್ ಆರ್ಟ್, ಕರಾಟೆ, ಜೂಡೋದಂತಹ ಆತ್ಮರಕ್ಷಣೆಯ ಕಲೆಗಳು ನೆರವಿಗೆ ಬರಲಿವೆ ಎಂದರು. ಬಿಇಒ ಸೋಮಲಿಂಗೇಗೌಡ ಮಾತನಾಡಿ ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಉತ್ತಮವಾಗಿ ಕಾಪಾಡುತ್ತದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅಗತ್ಯ ಇಂದು ಹೆಚ್ಚಾಗಿದೆ ಎಂದರು. ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಲಿದೆ. ಹಾಗಾಗಿ ಮಕ್ಕಳಿಗೆ ಈ ಕ್ರೀಡೆ ಅವಶ್ಯ ಎಂದರು. ಡಾ ಭವ್ಯಾ ಮಾತನಾಡಿ, ಔಷಧಗಳು ಒಮ್ಮೊಮ್ಮೆ ಆರೋಗ್ಯ ಕಾಪಾಡಲು ವಿಫಲವಾದರೂ ಕ್ರೀಡೆ ಸ್ವಾಸ್ಥೃ ವರ್ಧನೆಗೆ ಸಹಕಾರಿ ಆಗುತ್ತದೆ ಎಂದರು. ತರಬೇತುದಾರ ಅಬ್ದುಲ್, ಡಾ. ಲೋಕೇಶ್, ಎಚ್.ಟಿ. ಲಕ್ಷ್ಮಣ, ಎಚ್.ವಿ. ಸುರೇಶ ಕುಮಾರ್ ಇತರರು ಇದ್ದರು.