

ಸದೇಶ್ ಕಾರ್ಮಾಡ್ ಮೈಸೂರು
ಆಟೋ ರಿಕ್ಷಾದಲ್ಲಿ ಸಂಚರಿಸಲು ಬಯಸುವವರಿಗೆ ಪ್ರಸ್ತುತ ಓಲಾ, ಉಬರ್ ಕಂಪನಿಗಳು ಆನ್‌ಲೈನ್ ಮೂಲಕ ಸೇವೆ ಒದಗಿಸುತ್ತಿದ್ದು, ಈ ಸಾಲಿಗೆ ಸದ್ಯದಲ್ಲಿಯೇ ‘ಮಾರ್ಸ್’ ಸೇರ್ಪಡೆಗೊಳ್ಳಲಿದೆ. ಇದು ನಗರದ ಆಟೋ ಚಾಲಕರೇ ನಿರ್ವಹಿಸುವ ಆನ್‌ಲೈನ್ ಸೇವೆಯಾಗಿದೆ.
ಓಲಾ, ಉಬರ್ ಕಂಪನಿಗಳ ಆ್ಯಪ್ ಮಾದರಿಯಲ್ಲಿಯೇ ‘ಮೈಸೂರು ಆಟೋ ರಿಕ್ಷಾ ಸರ್ವೀಸ್’ (ಮಾರ್ಸ್) ಆ್ಯಪ್ ಕಾರ್ಯನಿರ್ವಹಿಸಲಿದೆ. ನಗರದ ಆಟೋ ಚಾಲಕರು ಒಟ್ಟುಗೂಡಿ ಹಣ ಹೂಡಿಕೆ ಮಾಡಿ ಖಾಸಗಿ ಕಂಪನಿಯೊಂದರ ಮೂಲಕ ಈ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿರುವುದು ಒಂದು ವಿಶೇಷವಾದರೆ ಈ ‘ಮಾರ್ಸ್’ ಪ್ರಯಾಣಿಕರಿಗೆ ಆರ್‌ಟಿಒ ದರದಲ್ಲಿಯೇ ಸೇವೆ ನೀಡುತ್ತದೆ ಎಂಬುದು ಮತ್ತೊಂದು ವಿಶೇಷ. ಆಟೋ ಚಾಲಕ ಸಾಯಿಬಾಬ ನಾಗರಾಜ್ ತಮ್ಮ ಸ್ನೇಹಿತರ ಜತೆಗೂಡಿ ಈ ಆ್ಯಪ್‌ಅನ್ನು ಅಭಿವೃದ್ಧಿ ಪಡಿಸಿದ್ದಾರೆ.
ಆಟೋ ಚಾಲಕರು ವಿಪರೀತ ಹಣ ಪಡೆಯುತ್ತಾರೆ ಎಂಬ ಸಾರ್ವಜನಿಕರ ದೂರು ಹಾಗೂ ಖಾಸಗಿ ಕಂಪನಿಗಳಿಂದ ನಮಗೆ ನ್ಯಾಯಯುತವಾಗಿ ದೊರೆಯಬೇಕಾದಷ್ಟು ಮೊತ್ತ ದೊರೆಯುತ್ತಿಲ್ಲ ಎಂಬ ಆಟೋ ಚಾಲಕರ ಅಳಲು ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ. ಸೆ.10ರ ನಂತರ ನಗರದಲ್ಲಿ ‘ಮಾರ್ಸ್’ ತನ್ನ ಸೇವೆ ಪ್ರಾರಂಭಿಸುವ ನಿರೀಕ್ಷೆ ಇದೆ. ಮಾರ್ಸ್ ತನ್ನ ಸೇವೆ ಪ್ರಾರಂಭಿಸಿದ ನಂತರ ಸಾರ್ವಜನಿಕರು ಗೂಗಲ್ ಪ್ಲೇ ಸ್ಟೇರ್‌ನಲ್ಲಿ ‘ಮಾರ್ಸ್’ ಎಂದು ಸರ್ಚ್ ಮಾಡಿ ಈ ಆಟೋ ಸೇವೆಯನ್ನು ಪಡೆಯಬಹುದು. ಪ್ರಯಾಣಿಕರ ದೂರು ಹಾಗೂ ಸಲಹೆಗಳನ್ನು ಸ್ವೀಕರಿಸಲು ಕಸ್ಟಮರ್ ಕೇರ್ ಸೆಂಟರ್‌ಅನ್ನು ಸಹ ತೆರೆಯಲು ನಿರ್ಧರಿಸಲಾಗಿದೆ.
ಪ್ರಮಾಣಿಕವಾಗಿ ಆಟೋ ರಿಕ್ಷಾ ಚಾಲನೆ ಮಾಡಿ ಜೀವನ ನಡೆಸುವವರಿಗೆ ಮಾರ್ಸ್ ವರದಾನವಾಗಲಿದೆ. ಮಾರ್ಸ್ ಸೇವೆಯ ವ್ಯಾಪ್ತಿಗೆ ಆಟೋ ಚಾಲಕರು ಒಳಪಡಬೇಕಾದರೆ ಕಡ್ಡಾಯವಾಗಿ ಚಾಲನಾ ಪರವಾನಗಿ, ವಾಹನದ ಎಲ್ಲ ದಾಖಲೆಗಳು, ಇನ್ಸ್‌ರೆನ್ಸ್ ಹೊಂದಿರಬೇಕು ಹಾಗೂ ಪೊಲೀಸ್ ಪರಿಶೀಲನೆಯನ್ನು ಪೂರ್ಣಗೊಳಿಸಿರಬೇಕು. ಜತೆಗೆ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನಗರದಲ್ಲಿ 30 ಸಾವಿರಕ್ಕೂ ಹೆಚ್ಚು ಆಟೋಗಳು ಇದ್ದು, ಈ ಪೈಕಿ ಈಗಾಗಲೇ 2 ಸಾವಿರಕ್ಕೂ ಹೆಚ್ಚು ಆಟೋ ಚಾಲಕರು ಮಾರ್ಸ್ ಆ್ಯಪ್ ಬಳಸಲು ಉತ್ಸಾಹ ತೋರಿದ್ದಾರೆ. ಹಂತ ಹಂತವಾಗಿ ಮತ್ತಷ್ಟು ಚಾಲಕರನ್ನು ಈ ವ್ಯಾಪ್ತಿಯಡಿಗೆ ತರುವ ಗುರಿಯನ್ನು ಹೊಂದ ಲಾಗಿದೆ.
ಇವಿ ಆಟೋಗಳಿಗೆ ಅವಕಾಶವಿಲ್ಲ: ಎಲೆಕ್ಟ್ರಿಕ್ ಆಟೋಗಳನ್ನು ‘ಮಾರ್ಸ್’ ಸೇವೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಎಲೆಕ್ಟ್ರಿಕ್ ಆಟೋಗಳು ಸಾರ್ವಜನಿಕರಿಗೆ ಬಾಡಿಗೆ ರೂಪದಲ್ಲಿ ಸೇವೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಈ ಕಾರಣಕ್ಕೆ ಇವಿ ಆಟೋಗಳನ್ನು ಮಾರ್ಸ್ ಸೇವೆಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಉಳಿದಂತೆ ಹಳದಿ ಬೋರ್ಡ್ ಇರುವ ಎಲ್ಲ ಆಟೋಗಳನ್ನು ಮಾರ್ಸ್ ವ್ಯಾಪ್ತಿಯಡಿ ತರಲು ಉದ್ದೇಶಿಸಲಾಗಿದೆ. ಗ್ರೀನ್‌ಬೋರ್ಡ್ ಅಥವಾ ವೈಟ್ ಬೋರ್ಡ್ ಆಟೋಗಳು ಸಾರ್ವಜನಿಕರಿಗೆ ಬಾಡಿಗೆ ರೂಪದಲ್ಲಿ ಸೇವೆ ನೀಡಲು ಸರ್ಕಾರ ಅವಕಾಶ ಮಾಡಿಕೊಟ್ಟರೆ ಯಲ್ಲೋ ಬೋರ್ಡ್ ಆಟೋಗಳನ್ನು ವೈಟ್‌ಬೋರ್ಡ್‌ಗೆ ಪರಿವರ್ತಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂಬುದು ನಗರದ ಚಾಲಕರ ಒತ್ತಾಯವಾಗಿದೆ.
ಆರ್‌ಟಿಒ ದರದಲ್ಲಿ ಸೇವೆ: ನಗರದ ಎಲ್ಲ ಆಟೋಗಳಲ್ಲೂ ಒಂದೇ ರೀತಿಯ ದರ ಇರಬೇಕು ಎಂಬ ಉದ್ದೇಶವನ್ನು ಮಾರ್ಸ್ ಹೊಂದಿದೆ. ಈ ಕಾರಣಕ್ಕೆ ಆರ್‌ಟಿಒ ದರವನ್ನು ಅಳವಡಿಸಿಕೊಳ್ಳಲಾಗಿದ್ದು, ಇದರ ಜತೆಗೆ ಸೇವಾ ಶುಲ್ಕವಾಗಿ ಅಲ್ಪ ಮೊತ್ತವನ್ನು ಗ್ರಾಹಕರಿಂದ ಪಡೆಯಲು ಉದ್ದೇಶಿ ಸಲಾಗಿದೆ. ‘ಮಾರ್ಸ್’ ಆಟೋ ಚಾಲಕರಿಂದ ಯಾವುದೇ ರೀತಿಯ ಶುಲ್ಕ ವಸೂಲಾತಿ ಮಾಡುವುದಿಲ್ಲ. ಗ್ರಾಹಕರಿಂದ ದೊರೆಯುವ ಸೇವಾ ಶುಲ್ಕದ ಹಣದಲ್ಲಿಯೇ ‘ಮಾರ್ಸ್’ ಆ್ಯಪ್‌ನ ನಿರ್ವಹಣೆ ಮಾಡಲಾಗುವುದು. ಹಣ ಉಳಿದರೆ ಚಾಲಕರಿಗೆ ಹಂತ ಹಂತವಾಗಿ ವಿವಿಧ ಸೇವೆಗಳನ್ನು ಒದಗಿಸಲು ಮಾರ್ಸ್ ಉದ್ದೇಶಿಸಿದೆ. ಪ್ರಸ್ತುತ ನಗರದಲ್ಲಿ ಆಟೋಗಳ ಮಿನಿಮಮ್ ದರ 30 ರೂ. ಇದ್ದು, ಇದರ ಮೇಲೆ ಪ್ರತಿ ಕಿ.ಮೀ.ಗೆ 15 ರೂ. ದರ ನಿಗದಿಯಾಗಿದೆ. ಪ್ರಸ್ತುತ ಖಾಸಗಿ ಕಂಪನಿಗಳು ನೀಡುವ ಆಟೋ ಸೇವೆಯಿಂದ ಸಾಕಷ್ಟು ಬಾರಿ ಆಟೋ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಗಲಾಟೆ ಆಗುತ್ತಿರುತ್ತದೆ. ಖಾಸಗಿ ಕಂಪನಿಗಳು ಆಫರ್ ಹೆಸರಿನಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಟೋ ಸೇವೆ ನೀಡುತ್ತದೆ. ಆದರೆ, ಈ ಆಫರ್‌ಗಳಿಂದ ನಮಗೆ ನಷ್ಟವಾಗುತ್ತಿದ್ದು, ಹೆಚ್ಚುವರಿ ಹಣ ನೀಡುವಂತೆ ಕೆಲವು ಚಾಲಕರು ಪ್ರಯಾಣಿಕರ ಬಳಿ ಒತ್ತಾಯಿಸುವಾಗ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಗಲಾಟೆಗಳು ನಡೆಯುವುದು ಸಹಜವಾ ಗಿದೆ. ‘ಮಾರ್ಸ್’ ಇಂತಹ ಒಂದು ಜಗಳಕ್ಕೆ ತೆರೆ ಎಳೆಯುವ ನಿರೀಕ್ಷೆ ಹೊಂದಲಾಗಿದ್ದು, ಇಲ್ಲಿ ಆ ರೀತಿಯ ಯಾವುದೇ ಆಫರ್‌ಗಳನ್ನು ಕಾಣಲು ಸಾಧ್ಯವಿಲ್ಲ.
ಆ್ಯಪ್ ಆಧಾರಿತ ಆಟೋ ಸೇವೆಗಳನ್ನು ನೀಡುತ್ತಿರುವ ಖಾಸಗಿ ಕಂಪನಿಗಳಿಂದ ಆಟೋ ಚಾಲಕರು ಅನುಭವಿಸುತ್ತಿರುವ ಅನ್ಯಾಯದಿಂದ ಹೊರ ಬರಬೇಕು ಹಾಗೂ ನಗರದ ಜನರಿಗೆ ಆರ್‌ಟಿಒ ನಿಗದಿ ಪಡಿಸಿದ ದರದಲ್ಲಿಯೇ ಸೇವೆ ದೊರೆಯಬೇಕು ಎಂಬ ಉದ್ದೇಶ ದಿಂದ ‘ಮಾರ್ಸ್’ ಆ್ಯಪ್‌ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್‌ನಿಂದ ನಗರದ ಆಟೋ ಚಾಲಕರ ಬದುಕಿನಲ್ಲಿ ಹೊಸ ಬದಲಾವಣೆ ನಿರೀಕ್ಷಿಸಬಹುದು. ಅದೇ ರೀತಿ ನಗರದ ನಾಗರಿಕರು ಇನ್ನು ಮುಂದೆ ಸಂತೃಪ್ತಿಯ ಆಟೋ ಸೇವೆಯನ್ನು ಪಡೆಯಬಹುದು.
ಸಾಯಿಬಾಬ ನಾಗರಾಜ್, ಆಟೋ ಚಾಲಕ, ‘ಮಾರ್ಸ್’ ಸಂಸ್ಥಾಪಕ