ಕಾಲೇಜು ವಿದ್ಯಾರ್ಥಿನಿಯೊಂದಿಗೆ ವಿವಾಹಿತ ಲೆಕ್ಚರ್​ ಲವ್​!

14 08 2025_BGR_RURAL-PAGE_5A
ವೈದ್ಯಕಿಯ ತಪಾಸಣೆಗೆ ಒಳಪಡಿಸುವ ಸಲುವಾಗಿ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಶಿಕ್ಷಕ ಪ್ರವಿಣ್​ನನ್ನು ಕರೆತರಲಾಗಿತ್ತು.
Published on

ದೊಡ್ಡಬಳ್ಳಾಪುರ : ಮುಂದೆ ಗುರಿ ಹಿಂದೆ ಗುರು ಇರಬೇಕು ಎಂಬ ಗಾದೆ ಮಾತಿದೆ. ಆದರೆ, ಇಲ್ಲೊಬ್ಬ ಉಪನ್ಯಾಸಕ ತಾನು ಪಾಠ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ಪ್ರೇಮ ಕಥೆಯೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ನಗರದ ಪ್ರತಿಷ್ಠಿತ ಸರ್ಕಾರಿ ಅನುದಾನಿತ ಖಾಸಗಿ ಕಾಲೇಜಿನಲ್ಲಿ 15 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕನಾಗಿದ್ದ ಪ್ರವಿಣ್​ (45) ಎನ್​ಸಿಸಿ ಅಧಿಕಾರಿ (ಲೆಫ್ಟಿನೆಂಟ್​) ಆಗಿಯೂ ಕೆಲಸ ಮಾಡುತ್ತಿದ್ದ. ಈ ವೇಳೆ ಮಕ್ಕಳಿಗೆ ಶಿಸ್ತಿನ ಪಾಠ ಹೇಳುತ್ತಿದ್ದ ಈತನೇ ಶಿಸ್ತು ತಪ್ಪಿದ್ದಾನೆ. ಮದುವೆ ಆಗಿ ಎರಡು ಮಕ್ಕಳಿದ್ದರೂ ವಿದ್ಯಾರ್ಥಿನಿ ಜತೆಯಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದರು. ಆದರೆ, ಪೊಲೀಸರು ಬಂಧಿಸುವ ವೇಳೆ ಇಬ್ಬರೂ ನಿದ್ದೆ ಮಾತ್ರೆ ನುಂಗಿ ಹೈಡ್ರಾಮಾ ಮಾಡಿದ್ದಾರೆ.

ಮದುವೆ ನಿಶ್ಚಯವಾಗಿತ್ತು: ಯುವತಿಗೆ ಆ.11ರಂದು ಮದುವೆ ನಿಶ್ಚಯ ಆಗಿತ್ತು. ಮದುವೆ ಹತ್ತಿರ ಆಗುತ್ತಿದ್ದಂತೆ ಯುವತಿ ಆ.2ರಂದು ಮನೆ ಬಿಟ್ಟು ಪರಾರಿಯಾಗಿದ್ದಳು. ಯಾರೋ ಯುವಕನ ಜತೆಯಲ್ಲಿ ಹೋಗಿರಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರ ತನಿಖೆಯಲ್ಲಿ ಉಪನ್ಯಾಸಕ ಪ್ರವಿಣ್​ ಕರೆದುಕೊಂಡು ಹೋಗಿರುವುದು ತಿಳಿದು ಬಂದಿದೆ. ಮೊದಲು ಯುವತಿಯನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದ. ನಂತರ ದೂರು ದಾಖಲಾದ ಮೇಲೆ ಬೆಂಗಳೂರಿನ ಎಸ್ಪಿ ಕಚೇರಿಗೆ ಬಂದು ಎಸ್ಪಿ ಮುಂದೆ ಯುವತಿ ಹೇಳಿಕೆ ನೀಡಿದ್ದಳು. ನಂತರ ಅಲ್ಲಿಂದಲೂ ತಪ್ಪಿಸಿಕೊಂಡು, ಸ್ನೇಹಿತರ ಹೆಸರಿನ ಮೇಲೆ ದಿನಕ್ಕೊಂದು ಸಿಮ್​ ಬದಲಿಸುತ್ತ ಪೊಲೀಸರಿಗೆ ಮಾಹಿತಿ ಸಿಗದ ರೀತಿ ಕಳ್ಳಾಟವಾಡಿದರು ಎನ್ನಲಾಗಿದೆ. ಹಲವು ದಿನಗಳ ಕಾರ್ಯಾಚರಣೆ ನಂತರ ಆನೇಕಲ್​ನ ವಸತಿಗೃಹವೊಂದರಲ್ಲಿ ಇದ್ದ ಮಾಹಿತಿ ತಿಳಿದ ಮಹಿಳಾ ಠಾಣಾ ಇನ್​ಸ್ಪೆಕ್ಟರ್​ ಡಾ.ನವೀನ ಕುಮಾರ್​ ನೇತೃತ್ವದ ತಂಡ ಇಬ್ಬರನ್ನೂ ವಶಕ್ಕೆ ಪಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಖಾಸಗಿ ಕಾಲೇಜು ಆಡಳಿತ ಮಂಡಳಿಯು ಶಿಕ್ಷಕನನ್ನು ವಜಾ ಮಾಡಿದೆ.

ಮೊದಲ ಹೆಂಡತಿಗೆ ವರದಣೆ ಕಿರುಕುಳ : ಪ್ರವಿಣ್​ಗೆ ಇಬ್ಬರು ಮಕ್ಕಳಿದ್ದಾರೆ. ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ಈತ ಪತ್ನಿಗೆ ವರದಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪ್ರವಿಣ್​ ಕುಟುಂಬಸ್ಥರು, ಜೀವ ಬೆದರಿಕೆ ಹಾಕಿ ನನ್ನನ್ನು ತವರು ಮನೆಗೆ ಕಳಿಸಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net