ಅಪ್ರಾಪ್ತ ಬಾಲಕಿಗೆ ವಿವಾಹ- ಪೋಕ್ಸೊ ವಿಶೇಷ ನ್ಯಾಯಾಲಯದಿಂದ ತೀರ್ಪು ಪ್ರಕಟ

crime
Published on

ಮಂಗಳೂರು: ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿ ಅಪ್ರಾಪ್ತ ಬಾಲಕಿಗೆ ವಿವಾಹ ನೆರವೇರಿಸಿದ ಆಕೆಯ ಪತಿ, ತಂದೆ- ತಾಯಿ, ಅತ್ತೆ- ಮಾವಗೆ ಒಂದು ವರ್ಷ ಕಠಿಣ ಶಿಕ್ಷೆ ಮತ್ತು 35 ಸಾವಿರ ರು. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ- 2 ಪೋಕ್ಸೊ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.

ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಮೊಂಟೆಪದವು ನಿವಾಸಿ ಮಹಮ್ಮದ್ ಇಮ್ತಿಯಾಜ್ (29), ಬಂಟ್ವಾಳ ಫರಂಗಿಪೇಟೆ ರಾಮಲ್‌ಕಟ್ಟೆಯ ಅಬ್ದುಲ್ ಖಾದರ್ (41) ಹಾಗೂ ರಮ್ಲತ್ (43), ಮಂಜನಾಡಿ ಮೊಂಟೆಪದವಿನ ಕೆ.ಐ. ಮೊಹಮ್ಮದ್ ಹಾಗೂ ಮೈಮುನಾ ಶಿಕ್ಷೆಗೀಡಾದ ಅಪರಾಧಿಗಳು.ಪ್ರಥಮ ಆರೋಪಿಯು ಬಾಲಕಿಯ ಪತಿಯಾಗಿದ್ದು, 2 ಮತ್ತು 3ನೇ ಆರೋಪಿಗಳು ಬಾಲಕಿಯ ತಂದೆ- ತಾಯಿ, 4 ಮತ್ತು 5ನೇ ಆರೋಪಿಗಳು ಮಾವ ಮತ್ತು ಅತ್ತೆಯಾಗಿದ್ದಾರೆ.

*ಏನಿದು ಪ್ರಕರಣ

ಅಪ್ರಾಪ್ತ ಬಾಲಕಿಗೆ 17 ವರ್ಷ ಪ್ರಾಯ ಆಗಿದ್ದಾಗ ಆಕೆಯ ತಂದೆ- ತಾಯಿ, ಅತ್ತೆ- ಮಾವ ಸೇರಿ ಪ್ರಥಮ ಆರೋಪಿ ಜತೆ ವಿವಾಹ ಮಾಡಿಸಿಕೊಟ್ಟಿದ್ದರು. 2023ರ ಜೂನ್ 1ರಂದು ಕೈರಂಗಳ ಗ್ರಾಮದ ನಂದರಪದವು ಎಂಬಲ್ಲಿರುವ ಎಸ್.ಕೆ. ಮಲ್ಟಿಪರ್ಪಸ್ ಹಾಲ್‌ನಲ್ಲಿ ಔತಣಕೂಟ ಏರ್ಪಡಿಸಿದ್ದರು. ಬಾಲಕಿಗೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡಿರುವ ಕಾರಣಕ್ಕಾಗಿ ಐವರು ಆರೋಪಿಗಳ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

*ಅಪರಾಧ ಸಾಬೀತು ಹಿನ್ನೆಲೆಯಲ್ಲಿ ಶಿಕ್ಷೆ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿ ಅಪ್ರಾಪ್ತ ಬಾಲಕಿಗೆ ವಿವಾಹ ನೆರವೇರಿಸಿದ ಪ್ರಕರಣದ ಬಗ್ಗೆ ಪೊಲೀಸ್ ನಿರೀಕ್ಷಕ ರಾಜೇಂದ್ರ ಬಿ. ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11ರಂತೆ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಭಿಯೋಜನೆ ಪರ ಒಟ್ಟು 10 ಸಾಕ್ಷಿದಾರರನ್ನು ವಿಚಾರಿಸಿ, 22 ದಾಖಲೆಗಳನ್ನು ಗುರುತಿಸಿತ್ತು. ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಎಲ್ಲ ಆರೋಪಿಗಳಿಗೆ 1 ವರ್ಷ ಕಠಿಣ ಶಿಕ್ಷೆ ಮತ್ತು ತಲಾ 5 ಸಾವಿರ ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net