ವಿವಾಹಕ್ಕೆ ಕೊರೊನಾ ಅಡ್ಡಿ; ಹಾಂಕಾಂಗ್ ಹಡಗಿನಲ್ಲಿ ಮಂಗಳೂರು, ಕಾಸರಗೋಡು ಯುವಕರು

KORONA
Published on

ಮಂಗಳೂರು: ವಾರದೊಳಗೆ ಹಸೆಮಣೆ ಏರಲಿದ್ದ ಕರಾವಳಿಯ ಇಬ್ಬರು ಯುವಕರು ಕೊರೊನಾ ಭೀತಿಯಿಂದ ಹಾಂಕಾಂಗ್​ನಲ್ಲಿ ತಡೆಹಿಡಿಯಲ್ಪಟ್ಟ ಹಡಗಿನಲ್ಲಿ ಸಿಲುಕಿಕೊಂಡಿದ್ದಾರೆ.

ಮಂಗಳೂರು ಸಮೀಪದ ಕುಂಪಲ ನಿವಾಸಿ ಗೌರವ್ ಹಾಗೂ ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರ ನಿವಾಸಿ ಚೀನಾ ಮೂಲದ ‘ವರ್ಲ್ಡ್ ಡ್ರೀಮ್ ಐಷಾರಾಮಿ ಹಡಗಿನ ಸಿಬ್ಬಂದಿಯಾಗಿದ್ದು, ಊರಿಗೆ ಬರುವುದು ಸಾಧ್ಯವಾಗಿಲ್ಲ.

ಉಳ್ಳಾಲದ ಕುಂಪಲದ ಮಾಧವ ಬಂಗೇರ -ಶಾರದಾ ದಂಪತಿ ಪುತ್ರ ಗೌರವ್ ವಿವಾಹ ಫೆ.10ರಂದು ಮಂಗಳೂರಿನ ಬೆಂದೂರ್​ವೆಲ್ ಚರ್ಚ್ ಸಭಾಂಗಣದಲ್ಲಿ ನಡೆಯಬೇಕಿತ್ತು. ಅವರು ಫೆ.4ರಂದು ಊರಿಗೆ ಬರಬೇಕಿತ್ತು. ಇನ್ನೂ ಬರಲು ಸಾಧ್ಯವಾಗದಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ.

ಕಾಸರಗೋಡು ಯುವಕನ ಮದುವೆ ಫೆ.16ರಂದು ನಿಗದಿಯಾಗಿದೆ. ಮನೆ ಮಂದಿ ಶನಿವಾರ ಇವರನ್ನು ಮೊಬೈಲ್ ಮೂಲಕ ಸಂರ್ಪಸಿದ್ದು ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿರುವುದು ಖಚಿತವಾಗಿದೆ. ಆದರೆ ಯಾವಾಗ ಆಗಮಿಸುತ್ತಾರೆ ಎಂಬುದು ಖಚಿತವಿಲ್ಲ. ಮದುವೆಗೆ ಕೆಲದಿನ ಮೊದಲು ಬರುವ ಸಾಧ್ಯತೆಗಳಿವೆ. ಶೀಘ್ರ ಊರು ತಲುಪಿದರೆ ನಿಗದಿತ ದಿನದಂದೇ ಮದುವೆ ನಡೆಯಲಿದೆ.

3,600 ಪ್ರಯಾಣಿಕರು ಬಾಕಿ

ವರ್ಲ್ಡ್ ಡ್ರೀಮ್ ಹಡಗಿನಲ್ಲಿ 3600ಕ್ಕೂ ಅಧಿಕ ಪ್ರಯಾಣಿಕರಿದ್ದು, ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ ಎನ್ನುವುದು ಹಡಗು ಮತ್ತು ಹಾಂಕಾಂಗ್​ನಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಗಳಿಂದ ಖಚಿತಪಟ್ಟಿದೆ. ಕಳೆದ ಭಾನುವಾರ ಚೀನಾದಿಂದ ಹೊರಟಿರುವ ಈ ಹಡಗಿನ ಪ್ರಯಾಣಿಕರನ್ನು ಇಳಿಸಲು ತೈವಾನ್​ನಲ್ಲಿ ಅವಕಾಶ ನೀಡಿರಲಿಲ್ಲ. ಮುಂದುವರಿದು ಹಾಂಕಾಂಗ್ ತಲುಪಿದಾಗ ಅಲ್ಲೂ ಅವಕಾಶ ಸಿಗದ ಕಾರಣ ಲಂಗರು ಹಾಕಲಾಗಿದೆ. ಪ್ರಯಾಣಿಕರಿಗೆ ಕೆಳಗೆ ಇಳಿಯಲು ಅವಕಾಶ ದೊರೆಯದೆ ಅಕ್ಷರಶಃ ದಿಗ್ಬಂಧನ ವಿಧಿಸಿದ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಮೆರಿಕ ನೆರವು

ಮಾರಣಾಂತಿಕ ಕರೊನಾ ವೈರಸ್​ನಿಂದ ತತ್ತರಿಸಿರುವ ಚೀನಾಕ್ಕೆ 715 ಕೋಟಿ ರೂ. (100 ಮಿಲಿಯನ್ ಡಾಲರ್) ನೆರವನ್ನು ಅಮೆರಿಕದ ಬಿಲ್ ಗೇಟ್ಸ್ ಪ್ರತಿಷ್ಠಾನ ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ ) 4,827 ಕೋಟಿ ರೂ. (675 ಮಿಲಿಯನ್ ಡಾಲರ್) ಸಹಾಯವನ್ನು ಈಗಾಗಲೇ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net