

ಚಿತ್ರದುರ್ಗ: ವಿವಾಹದ ಹೆಸರಲ್ಲಿ ದುಂದುವೆಚ್ಚ ಮಾಡುವುದೂ ಒಂದು ರೀತಿಯ ಭ್ರಷ್ಟಾಚಾರ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀಮಠದಲ್ಲಿ ಮಂಗಳವಾರ ಆಯೋಜಿಸಿದ್ದ 35ನೇ ವರ್ಷದ 8ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಮದುವೆಗೆ ದುಂದುವೆಚ್ಚ ಮಾಡಬೇಕಾಗಿಲ್ಲ. ಸಾಮೂಹಿಕ ವಿವಾಹದಲ್ಲಿ ಗುರುಗಳ ಆಶೀರ್ವಾದ ಪಡೆದು ವಿವಾಹವಾಗುವುದು ಶ್ರೇಷ್ಠ. ಶ್ರೀಮಠವು 35 ವರ್ಷಗಳಿಂದ ಸಾಮೂಹಿಕ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದರು.
ಮನೆಯಲ್ಲಿ ಪ್ರತಿಯೊಬ್ಬರನ್ನೂ ಪ್ರೀತಿಯಿಂದ ಕಾಣಬೇಕು. ಎಲ್ಲವೂ ನಿಮ್ಮದೇ ಎಂಬ ಪದ ಬಳಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮುರುಘಾಮಠ ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಮಠದಲ್ಲಿ ಅನ್ನದಾಸೋಹ ನಿರಂತರ ನಡೆದಿದೆ. ಅಂತೆಯೇ ಜ್ಞಾನದಾಸೋಹವೂ ಕೂಡ. ಶಾಲೆ-ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನೂ ನೀಡುತ್ತಾ ಬರಲಾಗಿದೆ ಎಂದು ತಿಳಿಸಿದರು.
ತ್ರಿವಿಧ ದಾಸೋಹದ ಜತೆಗೆ 4ನೇ ದಾಸೋಹವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವ, 5ನೇಯದ್ದಾಗಿ ಉಚಿತ ಆರೋಗ್ಯ ತಪಾಸಣೆ ಮೂಲಕ ಆರೋಗ್ಯ ದಾಸೋಹವವನ್ನೂ ಶ್ರೀ ಮಠದಿಂದ ಮಾಡಲಾಗುತ್ತಿದೆ ಎಂದರು.
ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಮದುವೆ ಎಂಬುದು ಕೇವಲ ವ್ಯವಹಾರಿಕವಲ್ಲ. ಅದು ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದಾಗಿದೆ. ಇದು ದುಬಾರಿ ಕಾಲ. ಬಡವರು ಮದುವೆ ಮಾಡುವುದು ಕಷ್ಟವಿರುವ ಕಾಲವಿದು. ಹಾಗಾಗಿ ಇಂಥವರಿಗೆ ಶ್ರೀ ಮಠದ ಸಾಮೂಹಿಕ ಕಲ್ಯಾಣ ಮಹೋತ್ಸವ ಸಹಕಾರಿಯಾಗಿದೆ ಎಂದರು.
ಮುಂಬಯಿ ಕೆಇಎಂ ಆಸ್ಪತ್ರೆಯ ವೈದ್ಯ ಡಾ.ಕೆ. ಬ್ರಿಜೇಶ್ ಅವರನ್ನು ಶ್ರೀ ಮಠದಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 6 ಜೋಡಿಗಳ ವಿವಾಹ ನೆರವೇರಿತು. ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಹಾಡಿದರು. ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿ, ಜ್ಞಾನಮೂರ್ತಿ ನಿರೂಪಿಸಿದರು.