

ಚಿತ್ರದುರ್ಗ: ಸರಳ ವಿವಾಹವೇ ಆದರ್ಶ, ಸರಳತೆ ಕುರಿತು ಮಾತನಾಡಬಹುದು, ಆದರೆ, ಅದನ್ನು ಆಚರಿಸುವ ಜನರು ಕಡಿಮೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ 35ನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿ, ಸರಳತೆ ಬೋಧಿಸುವ ಶ್ರೀ ಮಠ ಅದರಂತೆ ನಿರಂತರವಾಗಿ 35 ವರ್ಷಗಳ ಕಾಲ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಿಕೊಂಡು ಬರುತ್ತಿದೆ. ಅಮಾವಾಸ್ಯೆ, ಆಷಾಢ, ಶೂನ್ಯಮಾಸಗಳಲ್ಲಿ ಮದುವೆಯಾದವರೂ ಸುಖವಾಗಿದ್ದಾರೆ. ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಬೇಕಿದೆ. ನವಜೋಡಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ಮಾತನಾಡಿ, ನಮ್ಮಲ್ಲಿ ಶುಭ-ಅಶುಭ ಎಂಬುದು ಬರುವುದಿಲ್ಲ. ನಮ್ಮ ಮನಸ್ಥಿತಿಗಳು ಶುದ್ಧವಾಗಿದ್ದಾಗ ಯಾವ ಅಡೆತಡೆಗಳು ಎದುರಾಗದು. ಅನವಶ್ಯಕವಾಗಿ ಖರ್ಚು ಮಾಡುವುದು ಬೇಡ ಎಂದರು.
ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಂಸಾರ ತುಂಬಿದ ಕೊಡವಾಗಬೇಕು. ಸಂಸಾರದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ, ಹೊಂದಾಣಿಕೆಗಳಿರಬೇಕು ಎಂದರು.
ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಲಂಕೇಶ ದೇವರು ಸ್ವಾಗತಿಸಿದರು. ನಂದೀಶ್ ನಿರೂಪಿಸಿದರು.