

ಕಾರವಾರ: ಉನ್ನತ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳು ಮುದ್ರಿತ ಅಂಕ ಪಟ್ಟಿ (Marks Card)ವಿತರಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕೆ. ಲಕ್ಷಮೀಪ್ರಿಯಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಾಲೇಜ್ ಹಾಗೂ ವಿವಿಗಳ ವ್ಯವಸ್ಥೆಯನ್ನು ನಿರ್ವಹಿಸಲು ಸಮಗ್ರ ವಿಶ್ವ ವಿದ್ಯಾಲಯ ಮತ್ತು ಕಾಲೇಜ್ ನಿರ್ವಹಣಾ ವ್ಯವಸ್ಥೆ (ಯುಸಿಸಿಎಂಎಸ್) ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಾಗಿನಿಂದ ಈ ಸಮಸ್ಯೆ ಉದ್ಭವಿಸಿದೆ.
2020 ರಿಂದ ರಾಜ್ಯದ 22 ವಿವಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪದ್ಧತಿ (ಎನ್‌ಇಪಿ) ಜಾರಿಗೆ ತರಲಾಯಿತು. ಅಂದಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ಸಾವಿರಾರು ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ವಿತರಿಸಿಲ್ಲ.
ವಿಶ್ವ ವಿದ್ಯಾಲಯಗಳಲ್ಲಿ ಕೇಳಲು ಹೋದರೆ, ಡಿಜಿ ಲಾಕರ್‌ನಲ್ಲಿ ಡಿಜಿಟಲ್ ಅಂಕಪಟ್ಟಿ ಪಡೆಯಿರಿ ಎಂಬ ಉತ್ತರ ಬರುತ್ತದೆ. ಆದರೆ, ಡಿಜಿ ಲಾಕರ್‌ನಲ್ಲಿಯೂ ಅಂಕ ಪಟ್ಟಿ ಸಿಗುತ್ತಿಲ್ಲ. ಇತ್ತೀಚೆಗೆ ರಾಜ್ಯ ಸರ್ಕಾರ ಮತ್ತು ಎಸ್‌ಇಪಿ ಜಾರಿಗೆ ತಂದಿತು ಈಗಲೂ ಸಮಸ್ಯೆ ಮುಂದುವರಿದಿದೆ. ಇದರಿಂದ ಉನ್ನತ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ವಿರಿಸಲಾಗಿದೆ.
ಅಂಕ ಪಟ್ಟಿ ವಿತರಣೆ ವಿಚಾರದಲ್ಲಿ ಸುಮಾರು 200 ಕೋಟಿ ರೂ. ಅವ್ಯವಹಾರವಾಗಿರುವ ಶಂಕೆ ಇದ್ದು, ಈ ಕುರಿತು ತನಿಖೆ ನಡೆಸಬೇಕು. ಎಲ್ಲ 51 ಲಕ್ಷ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ವಿತರಿಸಬೇಖು ಎಂದು ಒತ್ತಾಯಿಸಿದರು.