ಅಂಕಪಟ್ಟಿಯಿಲ್ಲದೆ ಉದ್ಯೋಗ ವಂಚಿತರಾಗುವ ಆತಂಕ

Protest Logo_RED
Published on

 ಕುಂದಾಪುರ: ಮಂಗಳೂರು ವಿವಿ ಪದವಿ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿ ತಿಂಗಳು ಕಳೆದರೂ ಅಂಕಪಟ್ಟಿ ಕೈಸೇರದೆ ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗುತ್ತಿದ್ದಾರೆ. ಆ.11ರೊಳಗೆ ನ್ಯಾಯ ಸಿಗದಿದ್ದರೆ ಮಂಗಳೂರು ವಿವಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಭಂಡಾರ್‌ಕಾರ್ಸ್‌ ಕಾಲೇಜ್ ಎಬಿವಿಪಿ ಮುಖಂಡ ವಿತೇಶ್ ಶೆಟ್ಟಿ ಎಚ್ಚರಿಸಿದ್ದಾರೆ.

ಕುಂದಾಪುರ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಪದವಿ ಪರೀಕ್ಞಾ ಫಲಿತಾಂಶ ಅಂಕಪಟ್ಟಿ ಹಾಗೂ ಮೌಲ್ಯಮಾಪನ ಮುಂತಾದ ವಿವಿಧ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶನಿವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪ್ರತಿಷ್ಠಿತ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಕಪಟ್ಟಿ ದೊರೆಯದೆ ಉದ್ಯೋಗ ವಂಚಿತರಾಗುತ್ತಿದ್ದಾರೆ. 2022, ಆ.3 ರಂದು ಪ್ರಕಟವಾದ ತೃತೀಯ ಹಾಗೂ ಪಂಚಮ ಸೆಮಿಸ್ಟರ್ ಫಲಿತಾಂಶದಲ್ಲಿ ಸಾಕಷ್ಟು ಲೋಪದೋಷಗಳಿವೆ. ಪ್ರಥಮ ಸೆಮಿಸ್ಟರ್ ಮೌಲ್ಯಮಾಪನ ಆಮೆಗತಿಯಲ್ಲಿ ಸಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದ್ದು,ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಮನವಿ ಸ್ವೀಕರಿಸಿ, ಸ್ಥಳದಲ್ಲಿ ಮಂಗಳೂರು ವಿವಿ ರಿಜಿಸ್ಟ್ರಾರ್‌ರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಅಂಕಪಟ್ಟಿ ಈಗಾಗಲೇ ಬಂದಿದ್ದು, ತಕ್ಷಣ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತದೆ. ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ ಎಂದು ಮನವಿ ಮಾಡಿದರೆ ಆಯ್ಕೆಯಾದ ಕಂಪನಿಯೊಂದಿಗೆ ಮಾತನಾಡಿ ಒಂದಿಷ್ಟು ಸಮಯದ ಅವಕಾಶ ಮಾಡಿಕೊಡಲಾಗುತ್ತದೆ. ಉಪನ್ಯಾಸಕರು ಮೌಲ್ಯಮಾಪನಕ್ಕೆ ಬಾರದ ಕಾರಣ ಸಮಸ್ಯೆಯಾಗಿದ್ದು, ಅದನ್ನು ಸರಿಮಾಡುತ್ತೇವೆ ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.

ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜು, ಕೋಟೇಶ್ವರ ವರದರಾಜ್ ಶೆಟ್ಟಿ ಪ್ರಥಮದರ್ಜೆ ಕಾಲೇಜು, ಬಸ್ರೂರು ಶಾರದಾ ಕಾಲೇಜು, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು, ಎಸ್‌ಎಂಎಸ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಬಿವಿಪಿ ಮುಖಂಡರಾದ ಭಂಡಾರ್‌ಕಾರ್ಸ್‌ ಕಾಲೇಜಿನ ವಿತೇಶ್ ಶೆಟ್ಟಿ, ವಿಘ್ನೇಶ್, ವೀಕ್ಷಿತ್, ಬಸ್ರೂರು ಶಾರದಾ ಕಾಲೇಜು ವಿದ್ಯಾರ್ಥಿಗಳಾದ ರಾಹುಲ್, ದೀಪಾ, ನಿಶಾನ್, ವೈಭವಿ, ರಂಜಿತ್, ವಿಘ್ನೇಶ್, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ದರ್ಶನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net