ಮಾರ್ಕೋನಹಳ್ಳಿ ಜಲಾಶಯದಿಂದ ಕೆರೆಗಳಿಗೆ ನೀರು ; ಶಾಸಕ ಡಾ.ಎಚ್.ಡಿ.ರಂಗನಾಥ್ ಚಾಲನೆ

27 kunigal 1
??????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕುಣಿಗಲ್: ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಮಾರ್ಕೋನಹಳ್ಳಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ಸಾಲು ಕೆರೆಗಳು ಹಾಗೂ ರಾಗಿ ಬೆಳೆಗೆ ನೀರು ಹರಿಸುವುದಕ್ಕೆ ಶಾಸಕ ಡಾ.ಎಚ್.ಡಿ.ರಂಗನಾಥ್ ಶುಕ್ರವಾರ ಚಾಲನೆ ನೀಡಿದರು.

ಜು.20ರಂದು ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಎಚ್.ಡಿ.ರಂಗನಾಥ್, ಎಸಿ ಅಜಯ್, ತಹಸೀಲ್ದಾರ್ ಮಹಬಲೇಶ್ವರ, ಎಡೆಯೂರು ಹೇಮಾವತಿ ಪ್ರಭಾರ ಇಇ ಜಯರಾಮಯ್ಯ ನೇತೃತ್ವದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ನೀರು ಹರಿಸಲಾಗಿದೆ.

ಜಲಾಶಯದ ಪೂರ್ಣ ನೀರಿನ ಮಟ್ಟ 88.50 ಅಡಿ ಇದ್ದು, ಪ್ರಸ್ತುತ 86.60 ಅಡಿ ನೀರಿದೆ. ಅಮೃತೂರು ರೈತರ ಒತ್ತಾಯದಂತೆ ಭತ್ತ ಹಾಗೂ ರಾಗಿ ಬೆಳೆಗೆ ನೀರು ಹರಿಸಲಾಗಿದೆ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು. ನಾಗಮಂಗಲ ತಾಲೂಕಿನ ಹಲವು ಗ್ರಾಮಗಳಿಗೆ ಹಾಗೂ ಆದಿಚುಂಚನಗಿರಿ ಮಠಕ್ಕೆ 2013ರಲ್ಲಿ ಜಲಾಶಯದಿಂದ ನೀರು ಹರಿಸಲು ಅಂದಿನ ಬಿಜೆಪಿ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಇದನ್ನು ವಿರೋಧಿಸಿ ನಾನು 2 ವರ್ಷಗಳ ಕಾಲ ಕಾಮಗಾರಿ ತಡೆಹಿಡಿದದ್ದು ನಿಜ. ಜಲಾಶಯಕ್ಕೆ ನೀರು ನಿಗದಿಪಡಿಸದೆ ಯಾವ ರೀತಿ ನೀರು ತೆಗೆದುಕೊಂಡು ಹೋಗುತ್ತೀರಾ ಎಂದು ವಿರೋಧಿಸಿದ್ದೆ. ಈಗ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲಿ ತೀರ್ಮಾನವಾಗಿ ಸರ್ಕಾರ ಒಂದು ಟಿಎಂಸಿ ನೀರು ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರಲ್ಲಿ ನಾಗಮಂಗಲ ತಾಲೂಕಿಗೆ 150 ಎಂಸಿಎಫ್‌ಟಿ (ಮಿಲಿಯನ್ ಕ್ಯೂಬಿಕ್ ಫೀಟ್) ಹಾಗೂ ಮಾರ್ಕೋನಹಳ್ಳಿ ಜಲಾಶಯಕ್ಕೆ 850 ಎಂಸಿಎಫ್‌ಟಿ ನೀರು ಹರಿಸಲು ತೀರ್ಮಾನವಾಗಿದೆ, ಅಲ್ಲದೆ ಎನ್‌ಬಿಸಿ ನಾಲೆಯಿಂದ 21 ಕಿ.ಮೀ ನಾಲಾ ಕಾಮಗಾರಿ ಮಾಡಲು ಒಪ್ಪಿಗೆ ಸಿಕ್ಕಿದೆ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ಗ್ರಾಪಂ ಸದಸ್ಯ ಹರೀಶ್, ಮುಖಂಡ ನಂಜೇಗೌಡ ಇದ್ದರು.

ಎಡೆಯೂರು ಹೋಬಳಿ ಕೆರೆಗಳು ಭರ್ತಿ: ತಾಲೂಕಿನ ರೈತರ ಬದುಕು ಹಸನುಗೊಳಿಸಲು ನೀರಾವರಿಗೆ ಆದ್ಯತೆ ನೀಡಲಾಗಿದೆ. ಕಳೆದ 25 ವರ್ಷಗಳಿಂದ ಎಡೆಯೂರು ಹೋಬಳಿಯ ಕೆರೆಗಳಲ್ಲಿ ನೀರಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದನ್ನು ಮನಗೊಂಡು ಸಂಸದ ಡಿ.ಕೆ.ಸುರೇಶ್, ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹಕಾರದಿಂದ ಕಳೆದ ವರ್ಷದಿಂದ ಎಡೆಯೂರು ಹೋಬಳಿಯ 22 ಕೆರೆಗಳಿಗೆ ನೀರು ಹರಿಸಲಾಗಿದ್ದು, ಈ ಬಾರಿ ಶೇ.80 ಕೆರೆಗಳಿಗೆ ನೀರು ಹರಿಸಲಾಗಿದೆ. ಉಳಿದ ಆರು ಕೆರೆಗಳಿಗೆ ನೀರು ಹರಿಯುತ್ತಿದ್ದು, ಆ ಕೆರೆಗಳೂ ತುಂಬಲಿದೆ ಎಂದು ಶಾಸಕ ರಂಗನಾಥ್ ಹೇಳಿದರು.

ಲಿಂಕ್ ಕೆನಾಲ್‌ಗಾಗಿ ಹೋರಾಟ: ತಾಲೂಕಿಗೆ ಶಾಶ್ವತವಾಗಿ ಅಡೆತಡೆ ಇಲ್ಲದೆ ಹೇಮಾವತಿ ನೀರು ಬರಬೇಕಾದರೆ ಲಿಂಕ್ ಕೆನಾಲ್ ಅಗತ್ಯ. ಇದಕ್ಕೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 615 ಕೋಟಿ ರೂಪಾಯಿ ಮಂಜೂರು ಮಾಡಿ, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿತ್ತು. ಆದರೆ, ಈ ಯೋಜನೆಯನ್ನು ಈಗಿನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಇದರಿಂದ ತಾಲೂಕಿಗೆ ಅನ್ಯಾಯವಾಗಿದ್ದು, ಲಿಂಕ್ ಕೆನಾಲ್‌ಗಾಗಿ ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಡಾ.ರಂಗನಾಥ್ ಮನವಿ ಮಾಡಿದರು.

ಮಂಗಳ ಜಲಾಶಯಕ್ಕೆ ನೀರು: ಸಮ್ಮಿಶ್ರ ಸರ್ಕಾರದಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ 5 ಕೋಟಿ ರೂಪಾಯಿ ವೆಚ್ಚದಲ್ಲಿ ಏತ ನೀರಾವರಿ ಮೂಲಕ ನೀರು ಹರಿಸಲು ಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭದ ಹಂತಕ್ಕೆ ತರಲಾಗಿತ್ತು. ಆದರೆ, ಸರ್ಕಾರ ಬದಲಾವಣೆ ಆಗಿದ್ದರಿಂದ ಇದನ್ನು ತಡೆ ಹಿಡಿಯಲಾಗಿದೆ. ಈ ಸಂಬಂಧ ಐಸಿಸಿ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಜತೆಗೂಡಿ ಪ್ರಶ್ನಿಸಿದ್ದರಿಂದ ಮುಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು, ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ ಎಂದು ಶಾಸಕ ರಂಗನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net