ಮಹಿಳಾ ಸಂಘಗಳಿಗೆ ಆನ್‌ಲೈನ್‌ನಲ್ಲಿಯೂ ಮಾರುಕಟ್ಟೆ: ಸಿಇಒ

15
Published on

ಮೈಸೂರು: ಸಂಜೀವಿನಿ ಕಾರ್ಯಕ್ರಮದ ಮೇಳಗಳಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ, ಮಾರುಕಟ್ಟೆ ದೊರೆಯುತ್ತದೆ. ಅಲ್ಲದೆ ಆನ್‌ಲೈನ್ ಫ್ಲಾಟ್ ಫಾರ್ಮ್‌ಗಳಾದ ಅಮೆಜಾನ್, ಪ್ಲಿಫ್‌ಕಾರ್ಟ್‌ನಲ್ಲಿಯೂ ಉತ್ಪನ್ನಗಳು ದೊರೆಯುವಂತೆ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯಿತಿಯಿಂದ ಆಯೋಜಿಸಿದ್ದ ದೀಪ ಸಂಜೀವಿನಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ ಕಾರ್ಯಕ್ರಮದಡಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಮಣ್ಣಿನ ಹಣತೆಗಳು ಹಾಗೂ ಹಬ್ಬದ ವಿಶೇಷ ತಿಂಡಿ-ತಿನಿಸುಗಳ ಮಳಿಗೆಗಳ ಮೇಳವನ್ನು ಬಹಳ ಕಡಿಮೆ ಸಮಯದಲ್ಲಿ ಆಯೋಜಿಸಲಾಗಿದ್ದು, ಇದು ಕೇವಲ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೀಮಿತವಾಗಿತ್ತು. ಆದರೇ ಮುಂಬರುವ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸ್ವ-ಸಹಾಯ ಗುಂಪು ಗ್ರಾಮೀಣ ಬಡಜನರ ಒಂದು ಸಣ್ಣ ಹಾಗೂ ಆರ್ಥಿಕವಾಗಿ ಏಕರೂಪದ ಬಾಂಧವ್ಯದ ಗುಂಪಾಗಿದ್ದು, ಅವರು ನಿಯಮಿತವಾಗಿ ಸಾಧಾರಣ ಮೊತ್ತದ ಹಣವನ್ನು ಉಳಿಸಲು ಸ್ವಯಂ ಪ್ರೇರಣೆಯಿಂದ ಒಟ್ಟುಗೂಡುತ್ತಾರೆ. ಈ ರೀತಿಯ ಮೇಳದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಮಹಿಳೆಯರು ಭಾಗವಹಿಸಿದ್ದರಿಂದ ಮಹಿಳೆಯರಿಗೆ ಗುಡಿ ಕೈಗಾರಿಕೆ ಕುರಿತು ಅರಿವು ಮೂಡಿಸಲು ಸಹಕಾರಿಯಾಯಿತು ಎಂದರು.

ಈ ರೀತಿಯ ಮಾರಾಟ ಮಳಿಗೆಯಲ್ಲಿ ಮಹಿಳಾ ಸಂಘದಿಂದ ಮಹಿಳೆಯರು ಹೆಚ್ಚು ಭಾಗವಹಿಸಿ, ಉಳಿತಾಯ ಮಾಡಿ ನಿರಂತರ ಲಾಭ ಪಡೆಯಬಹುದು. ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಈ ರೀತಿಯ ಕಾರ್ಯ ಚಟುವಟಿಕೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದರು.

ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನೇಕ ಬ್ಯಾಂಕ್‌ಗಳಲ್ಲಿ ಲೋನ್, ವಿವಿಧ ಸಂಘ ಸಂಸ್ಥೆಯಿಂದ ಸಹಾಯಧನಗಳು ದೊರೆಯುತ್ತವೆ. ಅವುಗಳನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಮುಂದುವರಿದು ಸ್ವಾವಲಂಬಿ ಜೀವನ ನಡೆಸಬೇಕು, ಇತರ ಮಹಿಳೆಯರಿಗೂ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಈ ಮಾರಾಟ ಮೇಳ ಆಯೋಜಿಸಲಾಗಿದ್ದು, ನೀವು ತಯಾರಿಸಿರುವ, ಉತ್ಪಾದಿಸುವ ನಿಮ್ಮ ಉತ್ಪನ್ನಗಳಗೆ ಬೇಡಿಕೆ ಹೆಚ್ಚುವುದರಿಂದ ನೀವು ಸಹ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಮುಂದಿನ ಅಕೇಷನ್‌ಗಳಲ್ಲಿ ಅವುಗಳಿಗೆ ತಕ್ಕಂತೆ ಈ ರೀತಿಯ ಮಾರಾಟ ಮೇಳಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಮೇಳದಲ್ಲಿ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ತಿ.ನರಸೀಪುರ ತಾಲೂಕಿನ ದೊಡ್ಡ ಮಲಗೂಡು ಸಂಜೀವಿನಿ ಎನ್.ಆರ್. ಎಲ್.ಎಂ.ಭೀಮಬಾಯಿ, ಮಹಿಳಾ ಸ್ವಸಹಾಯ ಸಂಘದ ಮಣ್ಣಿನ ಕರಕುಶಲ ವಸ್ತುಗಳು, ಬೆಟ್ಟದಪುರ, ನಂಜನಗೂಡಿನ ರಾಂಪುರ, ಅಂಕನಹಳ್ಳಿ ಗ್ರಾಮ ಪಂಚಾಯಿತಿ ಮಳಿಗೆಗಳು ಕಂಡುಬಂದವು. ವಿವಿಧ ರೀತಿಯ ಪೂಜಾ ಸಾಮಗ್ರಿಗಳು, ಸುವಾಸನೆ ಬೀರುವ ಗಂಧದಕಡ್ಡಿ, ಸಾಂಬ್ರಾಣಿ, ಗೃಹ ಅಲಂಕಾರಿಕ ವಸ್ತುಗಳು, ದೀಪಗಳು, ಮರದಿಂದ ತಾಯಾರಿಸಿದ ಸಾಮಗ್ರಿಗಳು, ಪೇಂಟಿಂಗ್, ಸುಗಂಧಿತ ದ್ರವ್ಯ ಸೇರಿದಂತೆ ಇತರ ವಸ್ತುಗಳು ದೀಪಾವಳಿ ಮಾರಾಟ ಮೇಳದಲ್ಲಿ ಗಮನ ಸೆಳೆದವು.

ಈ ಸಂದರ್ಭದಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಪಿಒ ಪ್ರಭುಸ್ವಾಮಿ, ಲೆಕ್ಕಾಧಿಕಾರಿ ಸಿದ್ಧಗಂಗಮ್ಮ, ವಿವಿಧ ತಾಲೂಕುಗಳ ಸಂಜೀವಿನಿ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net