

ಹರಪನಹಳ್ಳಿ: ಪಟ್ಟಣದ ಕೋಟೆ ಕಾಳಮ್ಮ ದೇವಸ್ಥಾನದ ಹತ್ತಿರ ಶನಿವಾರ ಸಂತೆಯಲ್ಲಿ ವ್ಯಕ್ತಿಯೊಬ್ಬ ನಕಲಿ ತೊಗರಿ ಬೇಳೆ ಮಾರಾಟ ಮಾಡುತ್ತಿದ್ದಾನೆಂದು ಆರೋಪಿಸಿ ವ್ಯಾಪಾರಸ್ಥರು ತರಾಟೆಗೆ ತೆಗೆದುಕೊಂಡರು.
ಶನಿವಾರ ಸಂತೆ ನಡೆಯುತ್ತಿದ್ದ ವೇಳೆ ಓಮಿನಿ ವಾಹನದಲ್ಲಿ ಪಾಲಿಶ್ ಮಾಡಲಾದ ನಕಲಿ ತೊಗರಿ ಬೇಳೆಯನ್ನು ಒಂದು ಕೆಜಿಗೆ 100 ರೂ.ಯಂತೆ ವ್ಯಕ್ತಿ ಮಾರಾಟ ಮಾಡುತ್ತಿದ್ದನು. ಗ್ರಾಹಕರು ಸಹ ಕಡಿಮೆ ಬೆಲೆ ಎಂದು ಖರೀದಿಸಲು ಮುಂದಾಗಿದ್ದಾರೆ. ವ್ಯಾಪಾರಸ್ಥರು ತೊಗರಿ ಬೇಳೆಯನ್ನು ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿದೆ. ಇದನ್ನು ಮಾರಾಟಗಾರನಿಗೆ ಕೇಳಿದಾಗ ಕಲಬುರಗಿಯಿಂದ ಬಂದಿರುವುದಾಗಿ ಹೇಳಿದ್ದಾನೆ.
ಸ್ಥಳದಲ್ಲಿದ್ದ ಗ್ರಾಹಕರು ಇಂತಹ ಪದಾರ್ಥ ಮಾರಾಟ ಮಾಡಿ ಜನರ ಆರೋಗ್ಯ ಹಾಳು ಮಾಡಬೇಕು ಎಂದುಕೊಂಡಿದ್ದೀಯಾ ಎಂದು ತರಾಟೆ ತೆಗೆದುಕೊಂಡರು. ಅಲ್ಲದೆ ಕೆಲವರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಮಾರಾಟಗಾರ ಓಮಿನಿ ವಾಹನದೊಂದಿಗೆ ಜಾಗ ಖಾಲಿ ಮಾಡಿದ್ದಾನೆ.
ವ್ಯಾಪಾರಸ್ಥ ಕೊಟ್ರೇಶ್ ಮಾತನಾಡಿ, ಅನೇಕ ದಿನಗಳಿಂದ ಹಳ್ಳಿಗಳಲ್ಲಿ ಈ ರೀತಿಯಾಗಿ ನಕಲಿ ಬೇಳೆ, ದಿನಸಿ ಪದಾರ್ಥಗಳನ್ನು ವ್ಯಾಪಾರ ಮಾಡುತ್ತಾರೆ. ಇದರಿಂದ ನಮ್ಮ ವ್ಯಾಪಾರ ನಷ್ಟವಾಗುವುದರ ಜತೆಗೆ ಜನರ ಆರೋಗ್ಯ ಹಾಳಾಗುತ್ತದೆ. ಇಂತಹವರ ಬಗ್ಗೆ ಗ್ರಾಹಕರು ಎಚ್ಚರವಹಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.