ಮಾರುಕಟ್ಟೆಯಿಂದ ಕರಕುಶಲ ಉದ್ಯಮಕ್ಕೆ ಪ್ರೋತ್ಸಾಹ

h17-Gram Shilpi 2
Published on

ಹುಬ್ಬಳ್ಳಿ: ಮನೆಯಲ್ಲಿಯೇ ಕುಳಿತು ಕುಸುರಿ ಕೆಲಸ ಮಾಡುವ ಮಹಿಳೆಯರಿಗೆ ಮಾರುಕಟ್ಟೆಯ ಅಗತ್ಯವಿತ್ತು. ಲಘು ಉದ್ಯೋಗ ಭಾರತಿ ಸೇರಿ ಸರ್ಕಾರದಿಂದ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ. ಈ ಮೂಲಕ ಕರಕುಶಲ ಉದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಲಘು ಉದ್ಯೋಗ ಭಾರತಿ ಕರ್ನಾಟಕ, ಐಎಂಎಸ್ ಫೌಂಡೇಷನ್, ಡೆವೆಲಪ್ಮೆಂಟ್ ಕಮಿಷನರ್ (ಹ್ಯಾಂಡಿಕ್ರಾಫ್ಟ್) ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮ ಶಿಲ್ಪಿ 2.0 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ಸಣ್ಣ ಪ್ರಮಾಣದ ಉದ್ಯಮವನ್ನು ಮಹಿಳೆಯರು ಆರಂಭಿಸುತ್ತಾರೆ. ಬರುವ ಆದಾಯದಲ್ಲಿಯೇ ಸಂತೃಪ್ತಿ ಕಾಣುತ್ತಿರುತ್ತಾರೆ. ಮಾರುಕಟ್ಟೆಯ ಸವಲತ್ತಿನಿಂದ ಉದ್ಯಮ ಇನ್ನಷ್ಟು ವಿಸ್ತಾರವಾಗಿ ಆರ್ಥಿಕ ಸ್ವಾವಲಂಬಿಗಳಾಗಲಿದ್ದಾರೆ ಎಂದರು.

ಸಮಾಜ ಸೇವಕ ರಾಘವೇಂದ್ರ ಕಾಗವಾಡ ಮಾತನಾಡಿ, ದೇಶ ಕಟ್ಟುವ ಕೆಲಸದಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಪಾತ್ರ ದೊಡ್ಡದಿದೆ. ಅವುಗಳಿಗೆ ಪ್ರೋತ್ಸಾಹ ನೀಡಿದರೆ ಹತ್ತಾರು ಜನರಿಗೆ ಉದ್ಯೋಗ ಲಭಿಸುತ್ತದೆ. ದೇಶದ ಆರ್ಥಿಕತೆಯೂ ಪ್ರಬಲವಾಗುತ್ತದೆ ಎಂದರು.

ಹ್ಯಾಂಡಿಕ್ರಾಫ್ಟ್ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಕಿರಣ ಮಾತನಾಡಿ, ಸರ್ಕಾರದಿಂದ ಬರುವ ಸವಲತ್ತು ಸಣ್ಣ ಉದ್ಯಮಿಗಳಿಗೆ ತಲುಪಿಸುವ ಉದ್ದೇಶ ನಮ್ಮದು. ಈಗ ಆಯೋಜನೆ ಮಾಡುವ ಮೂಲಕ ಉದ್ಯಮದ ವಿಸ್ತಾರವಾಗಲಿದೆ. ಸರ್ಕಾರದಿಂದ ಇನ್ನಷ್ಟು ಸಹಾಯ ಪಡೆಯಲು ಅನುಕೂಲವಾಗಲಿದೆ ಎಂದರು.

ಲಘು ಉದ್ಯೋಗ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ, ಲಘು ಉದ್ಯೋಗ ಭಾರತಿ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯೆ ಹೇಮಾ ಬೆಂತೂರ, ಹು-ಧಾ ಅಧ್ಯಕ್ಷ ರಾಜು ಪಾಟೀಲ, ಎಸ್‌ಡಿಬಿಐ ಉಪ ಪ್ರಧಾನ ವ್ಯವಸ್ಥಾಪಕ ಆರ್. ಕುಲಶೇಖರನ್, ಎಂಎಸ್‌ಎಂಇ-ಡಿಎಫ್‌ಒ ಸಹಾಯಕ ನಿರ್ದೇಶಕ ಬಿ.ಎಸ್. ಜವಳಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net