ಮಾರುಕಟ್ಟೆ ಹೆಸರಲ್ಲಿ ದೇಶೀಯತೆ ಮರೆಯಾಗದಿರಲಿ: ಉಪನ್ಯಾಸಕ ಪ್ರೊ.ಕರಿಗೂಳಿ ಸಲಹೆ

FOOD MELA
ಕೊಪ್ಪಳ ತಾಲೂಕಿನ ಇರಕಲ್‌ಗಡಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಆಹಾರ ಉಣಬಡಿಸಿದರು.
Published on

ಕೊಪ್ಪಳ: ದೇಶೀಯತೆಯನ್ನು ಮಾರುಕಟ್ಟೆ ಹೆಸರಿನಲ್ಲಿ ಬಿಟ್ಟುಕೊಡಬಾರದು. ದೇಸಿ ಅಡುಗೆ, ಉಡುಗೆಗಳು ಪ್ರದರ್ಶನಕ್ಕೆ ಸೀಮಿತವಾಗದೆ ಜೀವನದ ಭಾಗವಾಗಬೇಕು ಎಂದು ಉಪನ್ಯಾಸಕ ಪ್ರೊ.ಕರಿಗೂಳಿ ಹೇಳಿದರು.

ತಾಲೂಕಿನ ಇರಕಲ್‌ಡಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟ ಆಹಾರ ಪದ್ಧತಿ ಮುಂದುವರಿಸಿಕೊಂಡು ಹೋಗುವುದು ಇಂದಿನ ಅಗತ್ಯ. ಉತ್ತರ ಕರ್ನಾಟಕ ಆಹಾರ ವೈವಿಧ್ಯತೆಯಲ್ಲೇ ಔಷಧ ಗುಣವಿದೆ ಎಂದರು.

ಆರೋಗ್ಯ ಕೇವಲ ಶಾರೀರಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿಲ್ಲ. ಅದು ಬೌದ್ಧಿಕ, ಸಾಮಾಜಿಕ ಸಂವೇದಾತ್ಮಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯದ ಬೆಳವಣಿಗೆ. ವಿದ್ಯಾರ್ಥಿಗಳು 21ನೇ ಶತಮಾನದ ಜಾಗತಿಕ ಸವಾಲುಗಳನ್ನು ಎದುರಿಸಿ ಮಾರುಕಟ್ಟೆ ತಂತ್ರಗಳನ್ನು ಕರಗತ ಮಾಡಿಕೊಳ್ಳಬೇಕು. ಯಶಸ್ವಿ ಉದ್ದಿಮೆದಾರರಾಗಲು ನಾವಿನ್ಯದಿಂದ ಕೂಡಿದ ಚಿಂತನೆ, ಕೌಶಲ ಕಲಿತುಕೊಳ್ಳಬೇಕೆಂದರು.

ವೈದ್ಯೆ ಡಾ.ಲಕ್ಷ್ಮೀ ಮಾತನಾಡಿ, ಒತ್ತಡದ ಬದುಕಿನಲ್ಲಿ ಬಿಪಿ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಸರ್ವೇಸಾಮಾನ್ಯ. ಇದಕ್ಕೆ ನಮ್ಮ ಆಹಾರ ಹಾಗೂ ಜೀವನ ಶೈಲಿ ಕಾರಣ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಇರುವ ಆಹಾರ ಸೇವನೆ ಆರೋಗ್ಯಕ್ಕೆ ಉತ್ತಮ. ಯುವಕರು ಜಂಕ್ ಫುಡ್ ದಾಸರಾಗಬಾರದು ಎಂದರು.

ಕಾಲೇಜು ಪ್ರಾಚಾರ್ಯ ಪ್ರೊ.ಉಮೇಶ ಮಾತನಾಡಿದರು. ಮೇಳದಲ್ಲಿ 150 ವಿದ್ಯಾರ್ಥಿಗಳು 31 ಮಳಿಗೆಗಳಲ್ಲಿ 125ಕ್ಕೂ ಹೆಚ್ಚು ವಿವಿಧ ದೇಶಿ ಮತ್ತು ಇತರ ಖಾದ್ಯಗಳನ್ನು ತಯಾರಿಸಿ, ಮಾರಾಟ ಮಾಡಿ, ಮಾರುಕಟ್ಟೆ ಕೌಶಲ ಅರಿತರು. ಪ್ರೊ.ಚಿನ್ನತಾಯಮ್ಮ, ಪ್ರೊ.ಪ್ರಕಾಶ ಗೌಡ, ಉಪನ್ಯಾಸಕರಾದ ಹುಚ್ಚಪ್ಪ ನರೇಗಲ್ ಮಾತನಾಡಿದರು. ಉಪನ್ಯಾಸಕರಾದ ಅನಿತ ಎಂ, ಶಂಕ್ರಯ್ಯ ಅಬ್ಬಿಗೇರಿಮಠ, ಆಶಾ ಸಿ., ದಿವ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net