ದರ ಕುಸಿದ ನಡುವೆಯೂ ಟೊಮ್ಯಾಟೊ ನಾಟಿ

28 myk
Published on

ಕೃಷ್ಣಮೂರ್ತಿ ಪಿ.ಎಚ್ ಮಾಯಕೊಂಡ

ಟೊಮ್ಯಾಟೊ ಬೆಲೆ ಪಾತಾಳಕ್ಕೆ ಕುಸಿಯುತ್ತಿದ್ದರೂ ಮಾಯಕೊಂಡ, ಆನಗೋಡು ಹೋಬಳಿಗಳ ಹಲವಾರು ಗ್ರಾಮಗಳಲ್ಲಿ ರೈತರು ಮತ್ತೆ ನಾಟಿ ಮಾಡಲು ಮುಂದಾಗಿದ್ದಾರೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 2 ರಿಂದ 4 ರೂ. ಗಳಿಗೆ ಮಾರಾಟವಾಗುತ್ತಿದೆ. 25 ಕೆಜಿ ಟೊಮ್ಯಾಟೊ ಹಣ್ಣಿನ ಒಂದು ಬಾಕ್ಸ್​ಗೆ ಕೇವಲ 40 ರಿಂದ 50 ರೂ. ಇದ್ದು ರೈತರಿಗೆ ನಷ್ಟ ತಂದೊಡ್ಡಿದೆ. ಹೀಗಾಗಿ ಕೆಲವೆಡೆ ರೈತರು ಜಮೀನಿನ ಟೊಮ್ಯಾಟೊ ಹಣ್ಣನ್ನು ಕೀಳದೆ ಹಾಗೆ ಬಿಟ್ಟಿದ್ದಾರೆ. ಆದರೆ ಇಂತಹ ನಷ್ಟದ ನಡುವೆಯೂ ಟೊಮ್ಯಾಟೊ ಬೆಳೆಯಲು ಮುಂದಾಗಿರುವುದು ವಿಶೇಷ.

ಈಗ ಸಸಿಗಳನ್ನು ನಾಟಿ ಮಾಡಿದರೆ, ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಕಟಾವಿಗೆ ಬರುತ್ತದೆ. ಆ ಸಂದರ್ಭದಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಉತ್ತಮ ಧಾರಣೆ ಸಿಗುವ ನಿರೀಕ್ಷೆ ಇದೆ ಎಂದು ಹುಚ್ಚವ್ವನಹಳ್ಳಿ ಗ್ರಾಮದ ಪ್ರಗತಿಪರ ತರಕಾರಿ ಬೆಳೆಗಾರರಾದ ಸಂತೋಷ್, ಹರೀಶ್, ಗಂಗಾಧರ್, ಸಮಿವುಲ್ಲಾ, ಚಿದಾನಂದ, ಅನಿಲ್ ಕುಮಾರ್, ವಿರೂಪಾಕ್ಷಪ್ಪ ಕಾಕಬಾಳ್ ತಿಳಿಸಿದ್ದಾರೆ.

ಸರ್ಕಾರ ತರಕಾರಿ, ಹಣ್ಣು, ಹೂಗಳಿಗೆ ಬೆಂಬಲ ಬೆಲೆಯನ್ನು ನಿಗದಿಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು. ಜತೆಗೆ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡಬೇಕು ಎಂಬುದು ರೈತರ ಮನವಿಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ 400 ಹೆಕ್ಟರ್​ಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ದರ ಸಂಪೂರ್ಣ ಕುಸಿತ ಕಂಡಿರುವುದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಹೊಸದಾಗಿ 350 ಹೆಕ್ಟೆರ್​ಗಿಂತ ಹೆಚ್ಚಿನ ಪ್ರದೇಶದಲ್ಲಿ ಸಸಿ ನಾಟಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. | ರಾಘವೇಂದ್ರ ಪ್ರಸಾದ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ದರ ಕುಸಿತದಿಂದ ಕಂಗಾಲಾಗಿರುವ ರೈತರು ಮಾರುಕಟ್ಟೆಗೆ ಟೊಮ್ಯಾಟೊ ಹಣ್ಣನ್ನು ತರುತ್ತಿಲ್ಲ. ಖರೀದಿದಾರರು ಸಹ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ತರಕಾರಿಗಳನ್ನು ಮಾರಾಟ ಮಾಡುವುದೇ ದುಸ್ತರವಾಗಿದೆ. | ಪ್ರವೀಣ್ ಕಳವೂರು, ಹೋಲ್​ಸೆಲ್ ವರ್ತಕ. ಹಣ್ಣು, ತರಕಾರಿಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ನೆರವಾಗಬೇಕು. ಮಾಯಕೊಂಡದ ಎಪಿಎಂಸಿ ಪ್ರಾಂಗಣದಲ್ಲಿ ಕೋಲ್ಡ್ ಸ್ಟೋರೇಜ್ ಘಟಕವನ್ನು ಸ್ಥಾಪನೆ ಮಾಡಿದರೆ ಅನುಕೂಲವಾಗುತ್ತದೆ. | ವಿ.ಆರ್. ಸಂತೋಷ್, ಪ್ರಗತಿಪರ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net