ಮಾರುಕಟ್ಟೆ, ಬಳಕೆದಾರರ ಶುಲ್ಕ ಹೆಚ್ಚಳ

27-klr-6
Published on

ಪಿ.ಎಸ್.ಹರೀಶ್ ಕೋಲಾರ

ಎಪಿಎಂಸಿ ಮಾರುಕಟ್ಟೆ ಹಾಗೂ ಬಳಕೆದಾರರ ಶುಲ್ಕವನ್ನು ಶೇ.0.35ರಿಂದ ಶೇ.1ಕ್ಕೆ ಹೆಚ್ಚಿಸಿರುವುದು ವರ್ತಕ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದಲ್ಲಿ 162 ಎಪಿಎಂಸಿಗಳಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದಡಿ ಎಪಿಎಂಸಿಗಳು ಹಣ್ಣು, ತರಕಾರಿ ವ್ಯಾಪಾರಸ್ಥರಿಂದ ಶೇ.1 ಬಳಕೆದಾರರ ಶುಲ್ಕ ಹಾಗೂ ಆಹಾರ ಧಾನ್ಯ ಮಾರಾಟಗಾರರಿಂದ ಶೇ.1.5 ಮಾರುಕಟ್ಟೆ ಶುಲ್ಕ ವಸೂಲಿ ಮಾಡುತ್ತಿದ್ದವು.

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ತಿದ್ದುಪಡಿ ತಂದ ನಂತರ ಪ್ರಾಂಗಣದಿಂದ ಹೊರಗೆ ನಡೆಯುವ ವಹಿವಾಟಿಗೆ ಶುಲ್ಕವಿಲ್ಲ. ಒಳಗಿನ ವ್ಯವಹಾರಕ್ಕೆ ಸರ್ಕಾರ ಆಗಸ್ಟ್‌ನಿಂದ ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕವನ್ನು ತಲಾ ಶೇ.0.35 ಪೈಸೆ ನಿಗದಿ ಮಾಡಿತು.

ಆದಾಯ ಖೋತಾ: ಶುಲ್ಕ ಇಳಿಕೆಯಿಂದ ಎಪಿಎಂಸಿ ಆದಾಯಕ್ಕೆ ಕತ್ತರಿ ಬಿದ್ದಿದೆ. ವಾರ್ಷಿಕ 650 ಕೋಟಿ ರೂ. ಆದಾಯ ಸಂಗ್ರಹದ ಪ್ರಮಾಣ 90 ಕೋಟಿ ರೂ.ಗೆ ಇಳಿದಿದೆ. ಶೇ.0.35 ಪೈಸೆಯಲ್ಲಿ ಪ್ರಾಂಗಣದ ಮೂಲಸೌಕರ್ಯ, ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಸಿಗುವ ಶೇ.0.14 ಪೈಸೆಯಲ್ಲಿ ಎಪಿಎಂಸಿಗಳಲ್ಲಿ ನಿರ್ವಹಣೆ ಕಷ್ಟವಾಗಿದೆ.

ಇದನ್ನು ಮನಗಂಡ ಸರ್ಕಾರ ಕರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆೆ ಎರಡೂ ರೀತಿಯ ಶುಲ್ಕವನ್ನು ಶೇ.1ಕ್ಕೆ ಹೆಚ್ಚಿಸಿ ಡಿಸೆಂಬರ್ 15ರಂದು ಆದೇಶಿಸಿದ್ದು, ಎಪಿಎಂಸಿಗಳಿಗೆ ಶೇ.0.35 ಪೈಸೆ ಸಿಗಲಿದೆ.

ವರ್ತಕರ ಆಕ್ರೋಶ: ಶುಲ್ಕ ಹೆಚ್ಚಳ ವರ್ತಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾರುಕಟ್ಟೆ ಒಳಗಿನ ವರ್ತಕರಿಗೆ ಮಾತ್ರ ಶುಲ್ಕ ನಿಗದಿಪಡಿಸಿ ಹೊರಗಿನ ವರ್ತಕರಿಗೆ ನಿಗದಿ ಮಾಡದಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿ ಯಾವುದೇ ಶುಲ್ಕ ಇಲ್ಲ, ಶುಲ್ಕ ರದ್ದುಗೊಳಿಸಬೇಕು ಇಲ್ಲವೇ ಮಾರುಕಟ್ಟೆಯೊಳಗೆ ಮತ್ತು ಹೊರಗಿನವರಿಗೂ ಶುಲ್ಕ ವಿಧಿಸಬೇಕು. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರಾಂಗಣದ ಒಳಗಿರುವ ವರ್ತಕರು ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.

ರಾಜ್ಯದಲ್ಲಿ ಎಪಿಎಂಸಿಗಳಲ್ಲಿ ಶುಲ್ಕ ರದ್ದುಪಡಿಸುವ ಗೋಜಿಗೆ ಸರ್ಕಾರ ಹೋಗುವುದಿಲ್ಲ. ಆದರೆ ಶುಲ್ಕದ ಪ್ರಮಾಣ ತಗ್ಗಿಸಲು ಅವಕಾಶವಿದೆ. ಡಿ. 28ರಂದು ನಡೆಯುವ ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಕೋಲಾರದ ಸ್ಥಿತಿಗತಿ ಹೇಗಿದೆ: ಜಿಲ್ಲೆಯ ಐದು ತಾಲೂಕುಗಳಲ್ಲಿ ಎಪಿಎಂಸಿಗಳಿದ್ದು, ಮಾಲೂರು ಹೊರತುಪಡಿಸಿ ಉಳಿದೆಡೆ ಎಪಿಎಂಸಿ ಪ್ರಾಂಗಣಗಳಿವೆ. ಮಾರುಕಟ್ಟೆ ಶುಲ್ಕ ಶೇ.1.5 ಹಾಗೂ ಬಳಕೆದಾರರ ಶುಲ್ಕ ಶೇ.1 ಇದ್ದಾಗ ಎಪಿಎಂಸಿಗಳಿಗೆ ಉತ್ತಮ ಆದಾಯ ಬರುತ್ತಿತ್ತು. ಶುಲ್ಕ ಶೇ.0.35ಕ್ಕೆ ಇಳಿಸಿದ ನಂತರ ಕೋಲಾರ ಎಪಿಎಂಸಿ ಹೊರತುಪಡಿಸಿ ಉಳಿದ ಎಪಿಎಂಸಿಗಳ ನಿರ್ವಹಣೆ ಕಷ್ಟವಾಗಿದೆ.

ರೈತರ ಹಿತದೃಷ್ಟಿಯಿಂದ ಶುಲ್ಕ ಏರಿಕೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಾಂಕೇತಿಕವಾಗಿ ಎಪಿಎಂಸಿ ಬಂದ್ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಡಿ.28ರ ಸಂಪುಟ ಸಭೆಯಲ್ಲಿ ಶುಲ್ಕ ಇಳಿಸದಿದ್ದಲ್ಲಿ ಪ್ರಾಂಗಣದೊಳಗೆ ಅನಿರ್ದಿಷ್ಟಾವಧಿಗೆ ವಹಿವಾಟು ನಡೆಸದಿರುವ ತೀರ್ಮಾನಕ್ಕೆ ಬರುತ್ತೇವೆ. ಆರ್.ಎ. ನಾರಾಯಣಸ್ವಾಮಿ, ಅಧ್ಯಕ್ಷ, ಜೈ ಕರ್ನಾಟಕ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘ ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ ಇಳಿಸಿದ ನಂತರ ಎಪಿಎಂಸಿ ಪ್ರಾಂಗಣದಲ್ಲಿ ಮೂಲಸೌಕರ್ಯ, ಪ್ರಾಂಗಣ ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚ ನಿರ್ವಹಣೆ ಕಷ್ಟವಾಗಿತ್ತು. ಡಿ.15ರಿಂದ ಶೇ.1 ರೂ.ಗೆ ಶುಲ್ಕ ಹೆಚ್ಚಳವಾಗಿದೆ. ರವಿಕುಮಾರ್, ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net