

ಬೆಳಗಾವಿ: ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ‘ಗಟ್ಟಿ ಬಸವಣ್ಣ ಯೋಜನೆ’ಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಮಾಹಿತಿ ನೀಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಹುಟ್ಟಿದ ಮಾರ್ಕಂಡೇಯ ನದಿ, ಗೋಕಾಕ ತಾಲೂಕಿನ ಗೊಡಚಿನಮಲ್ಕಿಯಲ್ಲಿ ಜಲಪಾತವಾಗಿ ಹರಿದು ಘಟಪ್ರಭಾ ನದಿ ಸೇರುತ್ತದೆ. ಹೀಗಾಗಿ ಮಾರ್ಕಂಡೇಯ ನದಿಗೆ ಅಣೆಕಟ್ಟು ನಿರ್ಮಿಸುವುದರಿಂದ ಗೋಕಾಕ ತಾಲೂಕು ಸೇರಿದಂತೆ ಸುತ್ತು ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದಂತಾಗುತ್ತದೆ ಎಂದರು.
ಅನೇಕ ಯೋಜನೆ ಪ್ರಗತಿಯಲ್ಲಿ: ಜಲಸಂಪನ್ಮೂಲ ಇಲಾಖೆ ಯಿಂದ ಜಿಲ್ಲೆಯಲ್ಲಿ ಚಚಡಿ ಏತ ನೀರಾವರಿ ಯೋಜನೆ, ಮುರುಗೋಡ ಏತ ನೀರಾವರಿ ಯೋಜನೆ, ವೆಂಕಟೇಶ್ವರ ಏತ ನೀರಾ ವರಿ ಯೋಜನೆ, ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ಕೆಂಪವಾಡದ ಬಸವೇಶ್ವರ ಏತ ನೀರಾವರಿ ಯೋಜನೆ, ಗೊಡಚಿನಮಲ್ಕಿ ಹಾಗೂ ಸಸಲಾಪುರ ಏತ ನೀರಾವರಿ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ರೈತರಿಗಾಗಿ ಕೊಟ್ಟಲಗಿ ಯೋಜನೆ: ಅಥಣಿ ತಾಲೂಕಿನ ರೈತರ ಅನುಕೂಲಕ್ಕಾಗಿ ಕೊಟ್ಟಲಗಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಎಲ್ಲ ಯೋಜನೆಗಳ ಮುಕ್ತಾಯಕ್ಕೆ ಕಾಲಮಿತಿ ಸೂಚಿಸಿದ್ದು, ಶೀಘ್ರವೇ ಜನಸಾಮಾನ್ಯರನ್ನು ತಲುಪಲಿದೆ. ರಾಯಬಾಗ, ಕುಡಚಿ, ಕಿತ್ತೂರು, ಬೈಲಹೊಂಗಲ, ಚಿಕ್ಕೋಡಿ, ಅಥಣಿ ಮತ್ತು ಹುಕ್ಕೇರಿ ತಾಲೂಕುಗಳಲ್ಲಿನ ಒಟ್ಟು137 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು. ಅಲ್ಲದೆ, ಜಿಲ್ಲೆಯಲ್ಲಿ ಕೈಗೊಂಡ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನೂ ಸಚಿವ ಜಾರಕಿಹೊಳಿ ವಿವರವಾಗಿ ತಿಳಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಪ್ರಾದೇಶಿಕ ಆಯುಕ್ತ ಆಮ್ಲಾನ ಆದಿತ್ಯ ಬಿಸ್ವಾಸ್, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಪಂ ಸಿಇಒ ಎಚ್.ವಿ. ದರ್ಶನ , ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಅಸಂಘಟಿತ ವಲಯದ ಜಿಲ್ಲೆಯ 65,907 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ 5 ಸಾವಿರ ರೂ.ನಂತೆ ಒಟ್ಟು 33 ಕೋಟಿ ರೂ. ನೆರವು ನೀಡಲಾಗಿದೆ. 1,095 ಕ್ಷೌರಿಕರಿಗೆ 55 ಲಕ್ಷ ರೂ., 295 ಅಗಸರಿಗೆ 15 ಲಕ್ಷ ರೂ. ನೆರವು ವಿತರಿಸಲಾಗಿದೆ. 8,500 ಕ್ಷೌರಿಕ ಮತ್ತು ಅಗಸ ಕಾರ್ಮಿಕರ ಅರ್ಜಿ ಪರಿಶೀಲಿಸಿ ಮೊತ್ತ ಪಾವತಿಗೆ ಕಳುಹಿಸಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ನೇಕಾರರ ಸಮ್ಮಾನ ಯೋಜನೆಯಡಿ ಪ್ರತಿ ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. 4,430 ನೇಕಾರರಿಗೆ ತಲಾ ಎರಡು ಸಾವಿರದಂತೆ 88.60 ಲಕ್ಷ ರೂ., ವಿದ್ಯುತ್ ಮಗ್ಗದ 15,056 ನೇಕಾರರಿಗೆ 301.112 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲಾಗಿದೆ. ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕ್‌ಗಳಿಂದ ಪಡೆದ ಗರಿಷ್ಠ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆಯಡಿ 1,632 ನೇಕಾರರಿಗೆ 8.86 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಮಾಹಿತಿ ನೀಡಿದರು.