ಮಾರ್ಕಂಡೇಯ ಜಲಾಶಯ ಭರ್ತಿ

web1
ಮಾರ್ಕಂಡೇಯ ಜಲಾಶಯದ ಎರಡು ಕ್ರಸ್ಟ್‌ಗೇಟ್‌ಗಳಿಂದ ನದಿಗೆ ನೀರು ಬಿಟ್ಟಿರುವುದು.
Published on

ಉಳ್ಳಾಗಡ್ಡಿ-ಖಾನಾಪುರ: ಹುಕ್ಕೇರಿ ತಾಲೂಕಿನ ಶಿರೂರ ಬಳಿ ಮಾರ್ಕಂಡೇಯ ನದಿಯ ಅಡ್ಡಲಾಗಿ ನಿರ್ಮಿಸಿರುವ ಮಾರ್ಕಂಡೇಯ ಜಲಾಶಯ ಭಾನುವಾರ ಭರ್ತಿಯಾಗಿದ್ದು, ವಿಶೇಷ ಪೂಜೆ ನೆರವೇರಿಸಿ 2 ಕ್ರಸ್ಟ್ ಗೇಟ್ ಮೂಲಕ ನದಿಗೆ ಸುಮಾರು 2,000 ಕ್ಯೂಸೆಕ್ ನೀರು ಬಿಡಲಾಗಿದೆ.

ಈ ಜಲಾಶಯ ಒಟ್ಟು 3.7 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಭಾನುವಾರ 3.2 ಟಿಎಂಸಿ ನೀರು ಸಂಗ್ರಹವಾಗಿದೆ. ಘಟ್ಟ ಪ್ರದೇಶಗಳಿಂದ ನದಿಗೆ 4,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ರಾತ್ರಿ ಸುಮಾರಿಗೆ 3,000 ಕ್ಯೂಸೆಕ್ ನೀರು ನದಿಗೆ ಹರಿಬಿಡುವ ಸಾಧ್ಯತೆ ಇದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿತ್ತು. ಆದರೆ, ಈ ವರ್ಷ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ವರ್ಷಧಾರೆ ಹೆಚ್ಚಿದ್ದರಿಂದ ಜು.21ರಂದು ಜಲಾಶಯ ಭರ್ತಿಯಾಗಿದೆ. ಜಲಾಶಯದಲ್ಲಿ ಅಧಿಕಾರಿಗಳು ವಿಶೇಷ ಪೂಜೆ ನೆರವೇರಿಸಿದರು. ಬೆಳಗಾವಿ ಎಸಿ ಶ್ರವಣ ನಾಯಿಕ, ಹುಕ್ಕೇರಿ ತಹಸೀಲ್ದಾರ್ ಮಂಜುಳಾ ನಾಯಿಕ, ಬಸ್ಸಾಪುರ ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಿಮನಿ, ಸ.ಕಾ ಅಭಿಯಂತ ಎಸ್.ಕೆ.ಎಂಟೆತ್ತಿನವರ, ಕಂದಾಯ ನಿರೀಕ್ಷಕರಾದ ಸಿ.ಕೆ.ಕಲಕಾಂಬಕರ, ಶರಣಪ್ಪ ಕಡದಿನ್ನಿ, ಮಾಜಿ ಅಧ್ಯಕ್ಷ ಲಗಮಣ್ಣ ಗುರವ್ವ, ಪ್ರಕಾಶ ನಾಯಿಕ, ಬಸು ಬೆಟಗಾರ, ಸಂಜಯ ತರಬರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net