ಭಕ್ತರಿಗೆ ಹೊಸ ತೇರು ಜನರಿಗೆ ಸಿಹಿ ನೀರು

22 MANJU 01
Published on

ಮರಿಯಮ್ಮನಹಳ್ಳಿ: ಕುಡಿವ ನೀರು ಸೇರಿದಂತೆ ಇತರೆ ಸಮಸ್ಯೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಸೈಕಲ್ ಸವಾರಿ ಮೂಲಕ ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

ಭಕ್ತಾಧಿಗಳ ದೇಣಿಗೆಯಿಂದ ಹೊಸದಾಗಿ ನಿರ್ಮಾಣವಾಗುತ್ತಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿ ಜೋಡಿ ರಥಗಳ ಕಾಮಗಾರಿಗಳನ್ನು ಪರಿಶೀಲಿಸಿದರು. ಮುಂಬರುವ ರಥೋತ್ಸವದ ನಿಮಿತ್ತ ಆಗಮಿಸುವ ಭಕ್ತರಿಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಮೃತ್ 2.0 ಯೋಜನೆಯಡಿ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಸಿಹಿ ನದಿ ನೀರು ಸರಬರಾಜಾಗುವ ಕಾಮಗಾರಿ, ಪ್ರೆಜರ್ ಫಿಲ್ಟರ್ & ಜಾಕ್ ವಾಲ್ ಪ್ರದೇಶಕ್ಕೆ ಪರಿಶೀಲಿಸಿ ರಥೋತ್ಸವ ಪ್ರಾರಂಭಕ್ಕೂ ಮುಂಚೆಯೇ ಪಟ್ಟಣದ ಎಲ್ಲಾ ಮನೆಗಳಿಗೂ ನದಿ ನೀರು ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಬಿಸಿಯೂಟ ತಯಾರಿ ಬಗ್ಗೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ ನಂತರ ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಶೈಕ್ಷಣಿಕ ರಂಗದ ಪ್ರಗತಿ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು. ಪಟ್ಟಣ ಪಂಚಾಯಿತಿಯಲ್ಲಿ ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ ತಕ್ಷಣವೇ ನಿಯಮಾನುಸಾರ ಸಾರ್ವಜನಿಕರಿಗೆ ಫಾರಂ 03 ವಿತರಿಸಲು ಸೂಚನೆ ನೀಡಲಾಯಿತು. ಸರ್ಕಾರದ ನಿಮಾನುಸಾರ ಅನುಮೋದಿತವಲ್ಲದ ಲೇ-ಔಟ್ ಗಳಿಗೆ ಬಿ-ಖಾತಾ ವಿತರಿಸಲು ಸೂಚನೆ ನೀಡಲಾಯಿತು. ಬಸ್ ನಿಲ್ದಾಣ , ಮಾರುಕಟ್ಟೆ ಪ್ರದೇಶ, ಆಟೋ ಸ್ಟ್ಯಾಂಡ್ ಮತ್ತು ಇತರೆ ಸಾರ್ವಜನಿಕ ಪ್ರದೇಶದಲ್ಲಿ ಸಾರ್ವಜನಿಕರೊಂದಿಗೆ ಮೂಲಭೂತ ಸೌಕರ್ಯ ಚರ್ಚಿಸಿದರು.

ಇದೇ ವೇಳೆ ಪಟ್ಟಣದಲ್ಲಿರುವ 9 ಆರ್‌ಒ ಪ್ಲಾಂಟ್ ದುರಸ್ಥಿ ಮಾಡದೇ ಸಿಬ್ಬಂದಿ ಬೇಕಾಬಿಟ್ಟಿ ಹಾಗೆಯೇ ಬಿಟ್ಟಿದ್ದು ಕಂಡುಬAತು. ಆರ್‌ಒ ಪ್ಲಾಂಟ್ ನಿರ್ವಹಣೆಗೆ ಮೂರು ಜನ ಸಿಬ್ಬಂದಿ ಇದ್ದರೂ ನಿರ್ವಹಣೆ ಮಾಡದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಲ್ಲದೇ 10 ದಿನದಲ್ಲಿ ಶುದ್ಧ ನೀರನ್ನ ಸರಬರಾಜು ಮಾಡಬೇಕು ಎಂದು ಸೂಚಿಸಿದರು. ಬಳಿಕ ಇಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಕೊಡುವ ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದರು

ಮದ್ಯದ ಅಂಗಡಿ ಬಂದ್‌ಗೆ ಸೂಚನೆ

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪಟ್ಟಣ ಪರಿಶೀಲನೆ ವೇಳೆ ಮದ್ಯದ ಅಂಗಡಿ ಎದುರು ಬಾಟಲಿ ಮತ್ತು ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡಿದ್ದು ಕಂಡು ಬಂದಿದೆ. ಮದ್ಯದ ಅಂಗಡಿ ಲೈಸೆನ್ಸ್ ತಾತ್ಕಾಲಿಕವಾಗಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಾವಗಡ ಕುಡಿವ ನೀರಿನ ಕಾಮಗಾರಿ ವೇಳೆ ಗುತ್ತಿಗೆದಾರ ರಸ್ತೆ ಅಗೆದಿದ್ದರು. ಬಳಿಕ ವರ್ಷ ಕಳೆದರೂ ರಸ್ತೆ ಸರಿಪಡಿಸುವುದಕ್ಕೆ ನೀಡಿದ ಗಡುವು ಮುಕ್ತಾಯಗೊಂಡಿದೆ. ಹೀಗಾಗಿ ಪಾವಗಡ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರನ ಮೇಲೆ ಎಫ್‌ಐಆರ್ ಮಾಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net