ದಂಡಿನ ಮಾರಿಯಮ್ಮ ದೇವಾಲಯದಿಂದ ಅದ್ದೂರಿ ದಸರಾ

mariyamma
Published on

ಮಡಿಕೇರಿ:

ಮಡಿಕೇರಿ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ದಸರಾ ಉತ್ಸವ ಶತಮಾನದ ಹೊಸ್ತಿಲಲ್ಲಿ ಇದ್ದು ಈ ವರ್ಷದಿಂದ ಶತಮಾನೋತ್ಸವ ಆಚರಣೆ ಶುರುವಾಗಲಿದೆ ಎಂದು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ನವೀನ್ ಅಂಬೆಕಲ್ ತಿಳಿಸಿದ್ದಾರೆ.

ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವತೆಯೂ ಒಬ್ಬರಾಗಿದ್ದು, ಸುಮಾರು 300 ವರ್ಷಗಳ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಈ ದೇವಾಲಯದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಐತಿಹಾಸಿಕ ಮಡಿಕೇರಿ ದಸರಾದಲ್ಲಿ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಕಳೆದ 94 ವರ್ಷಗಳಿಂದ ಭಾಗವಹಿಸುತ್ತಾ ಬಂದಿದ್ದು, ಈ ವರ್ಷ 95ನೇ ವರ್ಷದ ಉತ್ಸವಕ್ಕೆ ಸಾಕ್ಷಿ ಆಗುತ್ತಿದೆ. ದೇವಾಲಯದ ಕರಗ 9 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದ್ದು, ಈ ವರ್ಷ ಸೆ.22ರಿಂದ ಕರಗೋತ್ಸವ ಆರಂಭ ಆಗಲಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಸಿ.ಎಸ್. ರಂಜಿತ್ ಕುಮಾರ್ ಮಾತನಾಡಿ ದಸರಾ ಹಿನ್ನೆಲೆಯಲ್ಲಿ ಸೆ.22ರಿಂದ ಅ. 2ರ ತನಕ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತಿದೆ. ದಿನಂಪ್ರತಿ ಬೆಳ್ಳಿ, ಪಂಚಪುಷ್ಪ, ವಿಳ್ಯೆದೆಲೆ, ಕೊಲ್ಲೂರು ಮೂಕಾಂಬಿಕೆ, ಮಹಾಲಕ್ಷಿö್ಮÃ, ಚಾಮುಂಡೇಶ್ವರಿ, ಗುಲಾಬಿ ಹೂವು, ಶಾರದಾ ದೇವಿ, ಗಾಯತ್ರಿ ದೇವಿ, ಬಳೆ ಹಾಗೂ ನವಿಲಿನ ಅಲಂಕಾರ ಮಾಡಲಾಗುವು. 10 ದಿನವೂ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯ ಇರಲಿದೆ. ಈ ಬಾರಿ ಮಂಟಪಕ್ಕೆ ಅಂಧಕಾಸುರ ವಧೆ ಕಥಾ ಸಾರಾಂಶ ಅಳವಡಿಸಲಾಗುವುದು. 18 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಾಣ ಮಾಡಲಾಗುವುದು.

ಸರ್ಕಾರ ನಿಗದಿಪಡಿಸಿದ ಡೆಸಿಬಲ್‌ನಷ್ಟು ಪ್ರಮಾಣದಲ್ಲಿ ಮಾತ್ರ ಧ್ವನಿವರ್ಧಕ ಬಳಕೆ ಮಾಡಲಾಗುವುದು. ಕಥಾಸಾರಾಂಶದ ಕನಿಷ್ಠ 6 ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ದಸರಾ ಮುಗಿದ ನಂತರ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲಾಗುವುದು ಎಂದರು.

ಮಂಟಪ ಸಮಿತಿ ಅಧ್ಯಕ್ಷ ಎಂ.ಎಲ್. ಸತೀಶ್, ಉತ್ಸವ ಸಮಿತಿ ಅಧ್ಯಕ್ಷ ನಾಗರಾಜ್, ಟ್ರಸ್ಟಿ ಸುಬ್ರಹ್ಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net