ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿಗಳು ಪ್ರಥಮ

Published on

ಮೈಸೂರು: ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಮೈಸೂರು ಜಿಲ್ಲಾ ಇತಿಹಾಸ ವೇದಿಕೆಯಿಂದ ನಗರದ ಮಂಚೇಗೌಡನಕೊಪ್ಪಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಇತಿಹಾಸ ಪ್ರಶ್ನಾವಳಿಯಲ್ಲಿ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರು.

ವಾಣಿ ವಿಲಾಸ ಪದವಿಪೂರ್ವ ಕಾಲೇಜು ದ್ವಿತೀಯ ಮತ್ತು ಹುಣಸೂರಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.

ಅಲ್ಲದೆ ಹುಣಸೂರಿನ ಬಾಲಕಿಯರ ಪದವಿಪೂರ್ವ ಕಾಲೇಜು, ಹುಣಸೂರಿನ ಬಾಲಕರ ಪದವಿಪೂರ್ವ ಕಾಲೇಜು, ಕೆ.ಆರ್.ನಗರದ ಬಾಲಕರ ಪದವಿಪೂರ್ವ ಕಾಲೇಜು, ರಾಜೀವ್‌ನಗರದ ಸಂಬುದ್ಧ ಸ್ವತಂತ್ರ ಪದವಿಪೂರ್ವ ಕಾಲೇಜು, ಮೆಣಸಿನಕ್ಯಾತಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮಾಧಾಕಾರ ಬಹುಮಾನ ನೀಡಲಾಯಿತು. ಜಿಲ್ಲೆಯ 60 ಕಾಲೇಜುಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಖಜಾನೆ ಇಲಾಖೆ ಉಪ ನಿರ್ದೇಶಕಿ ಎಚ್.ಎಸ್.ಗಿರಿಜಾಂಬ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇತಿಹಾಸ ಅಧ್ಯಯನ ಅತ್ಯವಶ್ಯಕವಾಗಿದ್ದು, ಇಂತಹ ಸ್ಪರ್ಧೆಗಳು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ನೆರವಾಗಲಿವೆ ಎಂದರು. ಮಹಾರಾಜ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಉದಯಶಂಕರ್ ಸಮಾರೋಪ ಭಾಷಣ ಮಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಎಂ.ಮರಿಸ್ವಾಮಿ, ಮಂಚೇಗೌಡನ ಕೊಪ್ಪಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಸಿ.ಶಿವಮಲ್ಲು, ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷ ಎಚ್.ಬಿ.ವಾಸು, ಕಾರ್ಯಾಧ್ಯಕ್ಷ ಎ.ಎಲ್.ಉಮೇಶ್, ಎನ್.ಎಂ.ಶಿವಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net