

ಹೊನ್ನಾಳಿ: ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮಾರಿಕೊಪ್ಪದ ಹಳದಮ್ಮ ದೇವಿಯ ಮಹಾ ರಥೋತ್ಸವ ಶುಕ್ರವಾರ ಬೆಳಗ್ಗೆ 5.15ರ ಬ್ರಾಹ್ಮೀ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ರಥೋತ್ಸವಕ್ಕೂ ಮುನ್ನ ರಥಕ್ಕೆ ಶಾಂತಿ ಪೂಜೆ ನಡೆಸಿ ಅರ್ಚಕರಿಂದ ರಥಕ್ಕೆ ಬಲಿ ಅನ್ನ ನೈವೇದ್ಯ ಮಾಡಿದ ನಂತರ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು, ಭಕ್ತರು ರಥಕ್ಕೆ ಪೂಜೆ ಮಾಡಿದ ಮೇಲೆ ಹಳದಮ್ಮ ದೇವಿಯ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥದಲ್ಲಿ ಹಳದಮ್ಮ ದೇವಿ ಕೂರುತ್ತಿದ್ದಂತೆ ಭಕ್ತರು ಮತ್ತು ಸಕಲ ಬಿರುದಾವಳಿಗಳೊಂದಿಗೆ ಜೋಗಮ್ಮ ಮತ್ತು ಜೋಗಪ್ಪರುಗಳು ಹಳದಮ್ಮದೇವಿ ನಿನ್ನಾಲ್ಕು ಉದೋ.. ಉದೋ.. ಎಂಬ ಜಯ ಘೊಷದ ಮಧ್ಯೆ ರಥೋತ್ಸವ ನಡೆಯಿತು.
ಈ ನಡುವೆ ಭಕ್ತರು ರಥದ ಮೇಲೆ ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ ಇತರ ವಸ್ತುಗಳನ್ನು ತೂರುತ್ತಿದ್ದರು. ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆದು, ಬಾಳೆಹಣ್ಣು ನೈವೇದ್ಯ ಮಾಡಿ ಕೃತಾರ್ಥರಾದರು.
ಗುರುವಾರ ಬೆಳಗ್ಗೆಯಿಂದಲೇ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಮಹಾಮಂಗಳಾರತಿ ಸೇರಿ ಹಲವು ಧಾರ್ವಿುಕ ಪೂಜಾ ಕೈಂಕರ್ಯಗಳು ನಡೆದವು. ಗುರುವಾರ ರಾತ್ರಿಯೇ ಸಾವಿರಾರು ಭಕ್ತರು ಬುತ್ತಿ ಕಟ್ಟಿಕೊಂಡು ಹತ್ತಾರು ಮೈಲಿ ದೂರದಿಂದ ಎತ್ತಿನಗಾಡಿ, ಹಾಗೂ ವಾಹನಗಳ ಮೂಲಕ ಹಳದಮ್ಮ ದೇವಾಲಯಕ್ಕೆ ಬಂದು ವಾಸ್ತವ್ಯ ಹೂಡಿದರು. ದೇವಿಗೆ ಪೂಜೆ ಸಲ್ಲಿಸಿ ನಂತರ ಪ್ರಸಾದ ಸ್ವೀಕರಿಸಿ ದೇಗುಲದ ಪ್ರಾಂಗಣದಲ್ಲಿ ಉಳಿದುಕೊಂಡರು.
ಸೊರಟೂರು ಗ್ರಾಮದ ಹನುಮಂತ ದೇವರು, ಸುಂಕದಕಟ್ಟೆ ಮಂಜುನಾಥಸ್ವಾಮಿ, ನರಸಿಂಹ ದೇವರು, ಪಟ್ಟಣದ ಗಾಳಿ ದುರ್ಗಮ್ಮ ದೇವರ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಸಾಗಿ ರಥೋತ್ಸವಕ್ಕೆ ಮೆರುಗು ನೀಡಿದವು. ಶುಕ್ರವಾರ ಸಂಜೆ ಸೊರಟೂರಿನ ಹನುಮಂತದೇವರ ದಾಸಪ್ಪರಿಂದ ಹಣ್ಣಿನ ಮಣೇವು ಹಾಗೂ ಸಂಜೆ ಓಕುಳಿ ನಡೆಯಿತು. ಕಳಸ ವಿಸರ್ಜನೆಯೊಂದಿಗೆ ಎಲ್ಲ ಧಾರ್ವಿುಕ ಕಾರ್ಯಕ್ರಮಗಳು ಸಂಪನ್ನಗೊಂಡವು.
ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಶಿಕಾರಿಪುರ, ಹಾವೇರಿ, ಚಿತ್ರದುರ್ಗ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಭಾಗಗಳ ಭಕ್ತರು ಹಳದಮ್ಮದೇವಿ ರಥೋತ್ಸವದಲ್ಲಿ ಪಾಲ್ಗೊಂಡು ಹರಕೆ, ಕಾಣಿಕೆ ಸಮರ್ಪಿಸಿದರು.
ರಥೋತ್ಸವದಲ್ಲಿ ಮುಜರಾಯಿ ಅಧಿಕಾರಿ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಚಿನ್ನಪ್ಪ, ರೂಪ ಚನ್ನೇಶ್, ಹಳದಪ್ಪ, ಚಿನ್ನಪ್ಪ, ಮೈಲಪ್ಪ, ಅರ್ಚಕ ಮಲ್ಲಿಕಾರ್ಜುನ, ಪುಟ್ಟನಗೌಡ, ಪ್ರಭುಗೌಡ, ಪಾಲಾಕ್ಷಪ್ಪ, ರುದ್ರೇಶ್ ಮತ್ತು ಪೋಲೀಸ್ ಇಲಾಖೆ ಅಧಿಕಾರಿಗಳು, ಸಾವಿರಾರು ಭಕ್ತರು ಇದ್ದರು.