

ಭಟ್ಕಳ: ತಾಲೂಕಿನ ಸುಪ್ರಸಿದ್ಧ ಮಾರಿ ಜಾತ್ರೆಯು ಬುಧವಾರ ಮಾರಿಕಾಂಬೆ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿಧ್ಯಕ್ತವಾಗಿ ಆರಂಭಗೊಂಡಿದೆ.
ಮಂಗಳವಾರ ರಾತ್ರಿ ಮಾರಿಕಾಂಬೆ ದೇವಿ ಮೂರ್ತಿಯ ತಯಾರಕರಾದ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ಸಂಪನ್ನಗೊಂಡ ಬಳಿಕ ಮಾರಿ ದೇವಿಯ ಮೂರ್ತಿಯನ್ನು ಬೆಳಗ್ಗೆ 5:30 ಕ್ಕೆ ಮೆರವಣಿಗೆಯ ಮೂಲಕ ತಂದು ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು.
ಸುಮಾರು 25-30 ವರ್ಷಗಳ ಹಿಂದೆ ಮಾರಿಜಾತ್ರೆ ಗ್ರಾಮದೇವತೆ ಉತ್ಸವವಾಗಿತ್ತು. ಆದರೆ, ಇಂದು ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಇದೂ ಒಂದಾಗಿದೆ.
ಸಂಭ್ರಮದಿಂದ ಜರುಗುವ ಈ ಜಾತ್ರೆಯಲ್ಲಿ ಮೊದಲನೇ ದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು. ಜಾತ್ರಾ ಸಂಭ್ರಮ ಮುಗಿಯುವವರೆಗೂ ಅಕ್ಕ ಪಕ್ಕದ ತಾಲೂಕಿನಿಂದಲೂ ಭಕ್ತರು ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಕಣ್ಣು ಬೇನೆ, ಸಿಡುಬು ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟಲು ಭಕ್ತರು ದೇವಿಗೆ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದು.
ಸಚಿವ ಮಂಕಾಳ ವೈದ್ಯ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ವಿಠ್ಠಲ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಜೆ.ಡಿ. ನಾಯ್ಕ, ಬಿಜೆಪಿ ಹಿಂದುಳಿದ ಮೊರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಇತರರು ದೇವಿಯ ದರ್ಶನ ಪಡೆದರು.
ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಕೆ ತೀರಿಸುವಲ್ಲಿ ಪಾಲ್ಗೊಂಡಿದ್ದರು. ಗುರುವಾರ ಸಂಜೆ 4.30ಕ್ಕೆ ಮಾರಿ ಮೂರ್ತಿಯನ್ನು ಕೊಂಡೊಯ್ದು ಜಾಲಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಜಾತ್ರೆ ಹಿನ್ನೆಲೆ 2 ದಿನಗಳ ಕಾಲ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.