ಗಾಂಜಾ ಮಾರಾಟ, ಮಹಿಳೆ ಸೇರಿ ಏಳು ಜನರ ಬಂಧನ

10Manju4_Web
ಬೆಳಗಾವಿ ನಗರದ ಸಿಸಿಬಿಐ ಪೊಲೀಸರ ವಶದಲ್ಲಿರುವ ಬಂಧಿತರು.
Published on

ಬೆಳಗಾವಿ: ಗಾಂಜಾ ಮಾರಾಟ ಮತ್ತು ಸಾಗಣೆ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಹಾಗೂ ಸಿಸಿಬಿಐ ಪೊಲೀಸರು ಗುರುವಾರ ಪ್ರತ್ಯೇಕ ದಾಳಿ ನಡೆಸಿದ್ದು, ಮಹಿಳೆ ಸೇರಿ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ಬಂಧಿತರಿಂದ 31,050 ರೂ. ಮೌಲ್ಯದ 2.636 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿ ಗ್ರಾಮದ ಬಳಿ ಗಾಂಜಾ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಅವರಿಂದ 4 ಸಾವಿರ ರೂ. ಮೌಲ್ಯದ 670 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಲ್ಲದಬಾಗೇವಾಡಿ ಗ್ರಾಮದ ಬಸಗೌಡ ಪಾಟೀಲ (43), ಲಕ್ಷ್ಮಣ ಪಾಟೀಲ (38) ಬಂಧಿತರು. ಹುಕ್ಕೇರಿ-ಘಟಪ್ರಭಾ ಮುಖ್ಯ ರಸ್ತೆಯ ಬೆಲ್ಲದಬಾಗೇವಾಡಿ ಕ್ರಾಸ್ ಬಳಿ ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಪಿಎಸ್‌ಐ ಎಸ್.ಬಿ. ಗುಡಗನಟ್ಟಿ ತಿಳಿಸಿದ್ದಾರೆ.

ಬೆಳಗಾವಿ ಹಾಗೂ ಬೈಲಹೊಂಗಲ ತಾಲೂಕಿನಲ್ಲಿ: ಸಿಸಿಬಿಐ ಪೊಲೀಸರು ಗುರುವಾರ ದಾಳಿ ನಡೆಸಿ, ಗಾಂಜಾ ಮಾರುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ, 11,050 ರೂ. ಮೌಲ್ಯದ 1.150 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ನಡಕಿನ ಓಣಿಯ ಸಿದ್ದಪ್ಪ ಬಸವಂತ ಕುರುಬರ (35), ಸೋಮನಾಥ ಶಿವಪ್ಪ ಮಾದನಶೆಟ್ಟಿ (34), ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಲಕ್ಷ್ಮೀ ಗಲ್ಲಿಯ ಸಾಗರ ಸದಾಶಿವ ನಾಯಿಕ (21) ಹಾಗೂ ಪಂತ ಬಾಳೇಕುಂದ್ರಿ ಗ್ರಾಮದ ಪಂತ ನಗರದ ವಿನಾಯಕ ಬಸಪ್ಪ ಸೋಮಣ್ಣವರ (20) ಬಂಧಿತರು.

ಬೆಳಗಾವಿ ತಾಲೂಕಿನ ಸಿಂದೊಳ್ಳಿ ಕ್ರಾಸ್ ಹತ್ತಿರ ಬೆಳಗಾವಿ- ಬಾಗಲಕೋಟೆ ಹೆದ್ದಾರಿ ಪಕ್ಕದಲ್ಲಿಯೇ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ, ಬಂಧಿಸಲಾಗಿದೆ ಎಂದು ಎಸಿಪಿ ಮಹಾಂತೇಶ್ವರ ಜಿದ್ದಿ ತಿಳಿಸಿದ್ದಾರೆ. ಸಿಸಿಐಬಿ ಘಟಕದ ಪಿಎಸ್‌ಐ ಸಂಜೀವ ಕಾಂಬಳೆ ಹಾಗೂ ಸಿಬ್ಬಂದಿ ಬಿ.ಆರ್. ಮುತ್ನಾಳ, ಬಿ ಎನ್. ಬಳಗನ್ನವರ, ಎಸ್.ಸಿ. ಕೋರೆ, ಎಸ್.ಎಸ್. ಪಾಟೀಲ, ಸಿ.ಜೆ. ಚಿನ್ನಪ್ಪಗೋಳ, ಎಂ.ಎಂ. ವಡೇಯರ, ಎ.ಕೆ. ಕಾಂಬಳೆ, ಅಶೋಕ ಭೋಸಲೆ ದಾಳಿ ನಡೆಸಿದ್ದರು. ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net