ಮಂಗ್ಳೂರಲ್ಲಿ ಗಾಂಜಾ ಮಾರಾಟ ಹೆಚ್ಚಳ

ganja new
Published on

ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಲವು ತಿಂಗಳ ಹಿಂದೆ ಪೊಲೀಸ್ ಕಾರ್ಯಾಚರಣೆಯಿಂದ ತಣ್ಣಗಾಗಿದ್ದ ಗಾಂಜಾ ಅಡ್ಡೆಗಳು ಮತ್ತೆ ತಲೆ ಎತ್ತಿವೆ. ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿವೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪೊಲೀಸರು ದಾಖಲಿಸಿದ ಬೆರಳೆಣಿಕೆಯ ಪ್ರಕರಣಗಳು ಇದಕ್ಕೆ ಪುಷ್ಠಿ ನೀಡುತ್ತಿವೆ.

2019ರಲ್ಲಿ ನವೆಂಬರ್‌ತನಕ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವಾರು ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳನ್ನು ಪತ್ತೆ ಮಾಡಿದ್ದರು. ನ.1ರಂದು ಮಂಗಳೂರಿನಲ್ಲಿ 22 ಗ್ರಾಂ ಕೊಕೇನ್, 6 ಗ್ರಾಂ ಎಂಡಿಎಂಎ, 5 ಎಲ್‌ಎಸ್‌ಡಿ ಹಾಗೂ ಚರಸ್ ಸೇರಿದಂತೆ 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸಿಸಿಬಿ ಪೊಲೀಸರು ಮತ್ತು ಇಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದರು. ದೊಡ್ಡ ಮಟ್ಟದಲ್ಲಿ ನಡೆದ ಕಾರ್ಯಾಚರಣೆ ಇದೇ ಕೊನೆ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಾದಕ ವಸ್ತು ಸಾಗಾಟ ಮತ್ತು ಸೇವನೆ ಪ್ರಕರಣದಲ್ಲಿ 13,058ಕಿ.ಗ್ರಾಂ. ಗಾಂಜಾ ವಶಪಡಿಸಿ 58 ಮಂದಿಯನ್ನು ಬಂಧಿಸಿ ಅವರಿಂದ 5,84,700 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಎರಡು ತಿಂಗಳಲ್ಲಿ ಪತ್ತೆಯಾದ ಒಟ್ಟು 63 ಪ್ರಕರಣಗಳಲ್ಲಿ 19 ಗಾಂಜಾ ಸೇವನೆಯಾದರೆ, 44 ಗಾಂಜಾ ಸಾಗಾಟ ಪ್ರಕರಣವಾಗಿದೆ. ಉಡುಪಿ ಜಿಲ್ಲೆಯಲ್ಲೂ 45 ಗಾಂಜಾ ಪ್ರಕರಣಗಳು ಪತ್ತೆ ಮಾಡಿ 50ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಡಿಸೆಂಬರ್ ಮತ್ತು ಜನವರಿಯಲ್ಲಿ ಮಂಗಳೂರಿನಲ್ಲಿ ಒಂದೆರಡು ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ಪೂರೈಕೆ ಹೇಗೆ?

ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಗಾಂಜಾ ಮತ್ತಿತರ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ. ಹೊರ ರಾಜ್ಯದ ವಿದ್ಯಾರ್ಥಿಗಳು ಪ್ರಮುಖ ಗ್ರಾಹಕರು. ಅವರ ಜತೆಗೂಡಿ ಇಲ್ಲಿನ ವಿದ್ಯಾರ್ಥಿಗಳೂ ರುಚಿ ಹತ್ತಿಸಿಕೊಂಡು ದಾಸರಾಗುತ್ತಿದ್ದಾರೆ. ಮಂಗಳೂರಿನಲ್ಲಿ ಬಂದರು, ಬಾವುಟಗುಡ್ಡೆ, ಹೊಗೆಬೈಲ್, ಶಕ್ತಿನಗರ ಪರಿಸರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು ಬೀಚ್‌ಗಳು ಹಾಗೂ ಪ್ರಮುಖ ವಾಣಿಜ್ಯ ಮಳಿಗೆಗಳ ಆವರಣಗಳಲ್ಲಿ ಗಾಂಜಾ ಮಾರಾಟ ವ್ಯಾಪಕವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಗಲಭೆಯಿಂದ ಹಿನ್ನಡೆ: ಮಾದಕವಸ್ತು ಕಾರ್ಯಾಚರಣೆಗೆ ಡಿ.19ರಂದು ಮಂಗಳೂರಲ್ಲಿ ನಡೆದ ಗಲಭೆಯಿಂದ ಹಿನ್ನಡೆಯಾಗಿದೆ. ಪೊಲೀಸರು ಗಲಭೆಗೆ ಸಂಬಂಧಿಸಿದ ತನಿಖೆಯ ಒತ್ತಡದಲ್ಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಭೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವ ಒತ್ತಡ ಮಾದಕವಸ್ತು ಪತ್ತೆ ಪೊಲೀಸರಿಗೆ ಸವಾಲಾಗಿದೆ.

ಮಂಗಳೂರಿನಲ್ಲಿ ಮಾದಕವಸ್ತು ಜಾಲವನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಅಹಿತಕರ ಘಟನೆ ನಡೆದ ಬಳಿಕವೂ ಪೊಲೀಸ್ ತಂಡಗಳು ಮಾದಕ ದ್ರವ್ಯ ಮಾರಾಟಗಾರರ ಕಡೆಗೆ ನಿಗಾ ಇಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಡಾ.ಹರ್ಷ ಪಿ.ಎಸ್.ಮಂಗಳೂರು ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net