

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣ ಹಿನ್ನೆಲೆಯಲ್ಲಿ ಮುಡಾಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮರಿಗೌಡ ಬುಧವಾರ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬುಧವಾರ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀ ನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರವೇ ಮರಿಗೌಡ ರಾಜೀನಾಮೆ ನೀಡುವ ಸಾಧ್ಯತೆ ಇತ್ತು. ಆದರೆ, ಕಾರಣಾಂತರಗಳಿಂದ ಬುಧವಾರ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಮರಿಗೌಡ ತಲೆದಂಡ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಸಂಕಷ್ಟಕ್ಕೆ ಸಿಲುಕಲು ಮರಿಗೌಡ ಕಾರಣವಾಗಿದ್ದು, ಅವರಿಂದ ರಾಜೀನಾಮೆ ಪಡೆಯಬೇಕು ಎಂಬ ಒತ್ತಾಯ ಕಾಂಗ್ರೆಸ್ ಕಾರ್ಯಕರ್ತರಿಂದ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಮರಿಗೌಡರ ತಲೆದಂಡವಾಗುತ್ತಿದೆ.
‘ಮುಡಾದಲ್ಲಿ 500 ಕೋಟಿ ರೂ.ಗಿಂತ ಹೆಚ್ಚು ಅವ್ಯವಹಾರ ನಡೆದಿದ್ದು, ನನ್ನ ಗಮನಕ್ಕೆ ತಾರದೆ ಯಾವುದೇ ಕಡತಕ್ಕೆ ಅನುಮೋದನೆ ನೀಡಬಾರದು’ ಎಂದು ಮುಡಾ ಅಧ್ಯಕ್ಷ ಮರಿಗೌಡ ಆಯುಕ್ತರಾಗಿದ್ದ ದಿನೇಶ್ ಕುಮಾರ್‌ಗೆ ಪತ್ರ ಬರೆದು ನಿರ್ದೇಶನ ನೀಡಿದ್ದರು. ಈ ಪತ್ರದ ಆಧಾರದ ಮೇಲೆ ಶಾಸಕ ಟಿ.ಎಸ್. ಶ್ರೀವತ್ಸ ತನಿಖೆಗೆ ಒತ್ತಾಯಿಸಿದ್ದರು. ನಂತರ ಈ ವಿಚಾರ ರಾಜಕೀಯ ಸಂಘರ್ಷ, ಹೋರಾಟಕ್ಕೆ ಕಾರಣವಾಯಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯ ಸಂಕಷ್ಟಕ್ಕೆ ಮುಡಾ ಹಗರಣ ಸಿಲುಕಿ ಸಿತು. ಇಷ್ಟಕ್ಕೆಲ್ಲ ಮರಿಗೌಡರೇ ಕಾರಣ ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಆರೋಪಿಸುತ್ತಿದ್ದಾರೆ.
ಇತ್ತೀಚೆಗೆ ಮೈಸೂರಿಗೆ ಸಿದ್ದರಾಮಯ್ಯ ಆಗಮಿಸಿದ್ದ ಸಂದರ್ಭ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಅದ್ದೂರಿಯ ಸ್ವಾಗತ ಕೋರಿದ್ದರು. ಈ ಸಂದರ್ಭ ಸಿದ್ದರಾಮಯ್ಯಗೆ ಸ್ವಾಗತ ಕೋರಲು ಮರಿಗೌಡ ಆಗಮಿಸಿದ್ದ ಸಂದರ್ಭ ಸಿದ್ದರಾಮಯ್ಯ ಬೆಂಬಲಿಗರು ಮರಿಗೌಡಗೆ ೇರಾವ್ ಹಾಕಿ ಆಕ್ರೋಶ ಹೊರ ಹಾಕಿದರು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಮರಿಗೌಡ ಸ್ಥಳದಿಂದ ನಿರ್ಗಮಿಸಿದ್ದರು.
ಮರಿಗೌಡರಿಂದ ರಾಜೀನಾಮೆ ಪಡೆಯಬೇಕು ಎಂಬ ಒತ್ತಾಯ ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮರಿಗೌಡಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ದಸರಾ ಮುಕ್ತಾಯಗೊಂಡ ನಂತರ ರಾಜೀನಾಮೆ ನೀಡುವುದಾಗಿ ಮರಿಗೌಡ ಮಾತು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮರಿಗೌಡರ ರಾಜೀನಾಮೆ ಸನ್ನಿಹಿತವಾಗಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ, ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಏಕ ಸದಸ್ಯ ಆಯೋಗ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದವರಾದ ಮರಿಗೌಡ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸರಿಯಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಸೂಚನೆ ಮೇರೆಗೆ ಮರಿಗೌಡ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಒಟ್ಟಾರೆ ಮುಡಾ ಹಗರಣದಿಂದಾಗಿ ಮರಿಗೌಡ ತಲೆದಂಡವಾಗಿದೆ.