

ಮರಿಯಮ್ಮನಹಳ್ಳಿ: ನಿರಂತರ ಮಳೆಯಿಂದ ಡಣನಾಯಕನಕೆರೆ ವ್ಯಾಪ್ತಿಯ ನೂರಾರು ಎಕರೆಯಲ್ಲಿ ಹಾಳಾದ ಬೆಳೆಹಾನಿಯನ್ನು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಪರಿಶೀಲಿಸಿದರು.
ನಷ್ಟವಾದ ಬೆಳೆಗಳಿಗೆ ಪರಿಹಾರ ಕೊಡಿಸುವ ಹಿನ್ನೆಲೆಯಲ್ಲಿ ಸಿಎಂ ಜತೆ ಚರ್ಚಿಸಲಾಗುವುದು. ಜಲಾವೃತ ಕೃಷಿ ಭೂಮಿಯಲ್ಲಿ ಸಮೀಕ್ಷೆ ಕಷ್ಟ. ಹಾಗಾಗಿ ನೀರಿನ ಮಟ್ಟ ಕಡಿಮೆಯಾದ ಬಳಿಕ ಕಂದಾಯ-ಕೃಷಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ನಂತರ ಹಾನಿಯಾದ ಬೆಳೆಗಳಿಗೆ ಪರಿಹಾರ ಒದಗಿಸಲಾಗುವುದು. ಕೋಡಿ ಹಳ್ಳಕ್ಕೆ ಮೇಲ್ಸೇತುವೆ ಹಾಗೂ ರಸ್ತೆ ನಿರ್ಮಿಸಲಾಗುವುದು ಎಂದರು. ಸ್ಥಳದಲ್ಲಿದ್ದ ರೈತರ ಅಹವಾಲುಗಳನ್ನು ಸ್ವೀಕರಿಸಿ, ಅವರಿಗೆ ಧೈರ್ಯತುಂಬಿದರು.
ಡಣಾಯಕನಕೆರೆಯ ಆಧಿದೇವತೆ ಕನ್ನೀರಮ್ಮದೇವಿಗೆ ಪೂಜೆ ಸಲ್ಲಿಸಿದರು. ಪಾವಗಡ ಕುಡಿವ ನೀರಿನ ಕಾಮಗಾರಿ ವೀಕ್ಷಿಸಿದರು. ಈ ಸಂದರ್ಭ ಸಂಸದ ವೈ.ದೇವೇಂದ್ರಪ್ಪ, ಡಿಸಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಹರ್ಷಲ್ ಬೋಯಲ್, ಎಸಿ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಮಾಜಿ ಶಾಸಕ ನೇಮಿರಾಜ ನಾಯ್ಕ, ಮುಖಂಡರಾದ ಜಿ.ಪರಶುರಾಮ, ಚಿದ್ರಿ ಸತೀಶ್, ಪಿ.ಓಬಪ್ಪ, ವೀರೇಶ್ವರ ಸ್ವಾಮಿ, ಕೃಷ್ಣ ನಾಯ್ಕ, ಗರಗಪ್ರಕಾಶ, ಗುಂಡಾಸ್ವಾಮಿ, ಗುಂಡಾ ಕೃಷ್ಣ, ಸಿ.ಆರ್.ಗಾಳೇಶ, ಬದ್ರಿನಾಥಶೆಟ್ಟಿ, ಗೋವಿಂದರಾಜ ಶೆಟ್ಟಿ, ಉಲ್ಲಾಸ,ಮಂಜುನಾಥ ಕುರುಬ, ಉರುವಕೊಂಡ ವೆಂಕಟೇಶ, ನಂದೀಶ ಇತರರಿದ್ದರು.