

ಮರಿಯಮ್ಮನಹಳ್ಳಿ: ಪಟ್ಟಣ್ಣದ 9, 10ನೇ ವಾರ್ಡ್‌ನ ರಸ್ತೆಗಳಲ್ಲಿ ಬಿಡಾಡಿ ದನಗಳ ಗುಂಪುಗಳಿಂದ ಮಕ್ಕಳು, ವೃದ್ಧರು, ಬೈಕ್ ಸವಾರರಿಗೆ ನಿತ್ಯ ಕಿರಿಕಿರಿ ತಪ್ಪುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಪಪಂ ಆಡಳಿತ ಕಣ್ಣುಚ್ಚಿ ಕುಳಿತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರವಷ್ಟೇ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಪಟ್ಟಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಡಾಡಿ ದನ ಹಾಗೂ ಬೀದಿಬದಿ ಅವ್ಯವಸ್ಥೆ ಸರಿಪಡಿಸಿ ನೈರ್ಮಲ್ಯ ಕಾಪಾಡುವಂತೆ ಪಪಂ ಆಡಳಿತಕ್ಕೆ ಸೂಚಿಸಿದ್ದರು. ಅಧಿಕಾರಿಗಳು ಆಟಕುಂಟು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಹರಿಹರ ಮುಖ್ಯ ರಸ್ತೆಯ ಫುಟ್‌ಪಾತ್‌ನಲ್ಲಿ ಮಾಂಸದ ಅಂಗಡಿ, ಹೊಟೇಲ್‌ಗಳು ಇರುವುದರಿಂದ ಈ ರಸ್ತೆ ಬಿಡಾಡಿ ದನ, ಬೀದಿ ನಾಯಿಗಳಿಗೆ ಹೇಳಿ ಮಾಡಿಸಿದಂತಿದೆ.
ಕೂಡ್ಲಿಗಿ ರಸ್ತೆಯಿಂದ ಪೊಲೀಸ್ ಠಾಣೆವರೆಗೆ ನೂರಾರು ದನಗಳು ಪಾದಚಾರಿಗಳಿಗೆ ತೊಂದರೆಯನ್ನುಂಟು ಮಾಡುತ್ತಿವೆೆ. ಅಲ್ಲದೇ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅಪಘಾತಗಳನ್ನು ಸಹ ಮಾಡಿರುವ ಉದಾರಣೆಗಳು ಇವೆ. ಹಗಲು, ರಾತ್ರಿ ಬಿಡಾಡಿ ದನಗಳಿಗೆ ಈ ರಸ್ತೆಗಳೇ ಆಶ್ರಯ ತಾಣಗಳಾಗಿವೆ.
ಸಾರ್ವಜನಿಕರು ಹಲವು ಬಾರಿ ಪಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮರಿಯಮ್ಮನಹಳ್ಳಿ ಸುತ್ತಲೂ ನಾಲ್ಕೈದು ಗೋಶಾಲೆಗಳಿದ್ದರೂ ಅವುಗಳನ್ನು ಅಲ್ಲಿಗೆ ಸಾಗಿಸಲು ಯಾರೊಬ್ಬರು ಮುಂದಾಗುತ್ತಿಲ್ಲ. ಕೊಡಲೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂಬುದು ನಿವಾಸಿಗಳ ಆಗ್ರಹವಾಗಿದೆ.
ಬಿಡಾಡಿ ದನಗಳ ಉಪಟಳದಿಂದ ವಾರ್ಡಿನ ಜನರು ಸಮಸ್ಯೆ ಎದುರಿಸುವಂತಾಗಿದೆ. ಈ ದನಗಳು ಯಾರಿಗೆ ಸೇರಿವೆ ಎಂಬುದು ತಿಳಿಯುತ್ತಿಲ್ಲ. ದನಗಳನ್ನು ಗೋಶಾಲೆಗಳಿಗೆ ಸಾಗಿಸಲು ಸಾಕಷ್ಟು ಬಾರಿ ಪಪಂ ಗಮನಕ್ಕೆ ತರಲಾಗಿದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕುಂಬಕರ್ಣನಂತೆ ನಿದ್ದೆಗೆ ಜಾರಿದೆ.ಲಕ್ಷ್ಮೀ ರೋಗಾಣಿ ಮಂಜುನಾಥ ಪಪಂ ಸದಸ್ಯೆ ಪೊಲೀಸರ ಸಹಕಾರದಿಂದ ಬಿಡಾಡಿ ದನಗಳನ್ನು ಗುರುತಿಸಿ ಗೋಶಾಲೆಗೆ ಕಳುಹಿಸುವ ಕೆಲಸ ನಾಳೆಯಿಂದಲೇ ಶುರು ಮಾಡಲಾಗುತ್ತದೆ. ರಸ್ತೆ ಬದಿ ವ್ಯಾಪಾರಸ್ಥರು, ಮಾಂಸದ ಅಂಗಡಿಯವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಅವರಿಗೆ ಈಗಾಗಲೇ ಸ್ಥಳ ಗುರುತಿಸಲಾಗಿದ್ದು, ಶೀಘ್ರವೇ ಎಲ್ಲವನ್ನು ಸ್ಥಳಾಂತರ ಮಾಡಲಾಗುವುದು.ಗಾದಿಲಿಂಗನಗೌಡಪಪಂ ಮುಖ್ಯಾಧಿಕಾರಿ, ಮರಿಯಮ್ಮನಹಳ್ಳಿ