ಕೆ.ಆರ್.ಪೇಟೆ: ತಾಲೂಕಿನ ಮಾರೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ವೃದ್ಧಯರು ಮೃತಪಟ್ಟಿದ್ದು, ಆರು ಜನ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದು, 21 ಜನ ವೈರಲ್ ಡಯೇರಿಯಾಕ್ಕೆ ತುತ್ತಾಗಿ ಆತಂಕಕ್ಕೊಳಗಾಗಿದ್ದ ಗ್ರಾಮ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಇಬ್ಬರು ವೃದ್ಧೆಯರು ಮೃತಪಟ್ಟಿದ್ದರು. 21 ಜನರಲ್ಲಿ ವೈರಲ್ ಡಯೇರಿಯಾ ಪತ್ತೆಯಾಗಿತ್ತು. ಮಾರೇನಹಳ್ಳಿ 20, ಕುಂದೂರು ಒಬ್ಬರಲ್ಲಿ ಪತ್ತೆಯಾಗಿತ್ತು. ನಾಲ್ವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ, ಒಬ್ಬರು ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ, ಇನ್ನೊಬ್ಬರು ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹಿಂದಿರುಗಿದ್ದಾರೆ. ಉಳಿದವರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳು ದಾಖಲಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅನಾಹುತ ಆಗದಂತೆ ಕಲ್ಪಿಸಿದ ಸೌಲಭ್ಯವನ್ನು ಹಿಂಪಡೆದಿದ್ದಾರೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆ ವೈದ್ಯಕೀಯ ಸೇವೆ, ಹೆಚ್ಚುವರಿ ವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿ, ಆಂಬುಲೆನ್ಸ್ ನಿಯೋಜಿಸುವುದನ್ನು ಹಿಂಪಡೆದು, ಪ್ರಾಥಮಿಕ ಆರೋಗ್ಯ ಕೇಂದ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
ಕುಡಿಯುವ ನೀರಿನ ಮೂಲವನ್ನು ಪರೀಕ್ಷೆಗೊಳಪಡಿಸಲಾಗಿದೆ. ಪಂಚಾಯಿತಿ, ಕುಡಿಯಲು ಅವಲಂಬಿಸಿರುವ ಖಾಸಗಿ ಕೊಳವೆ ಬಾವಿ ನೀರನ್ನು ಪರೀಕ್ಷೆಗೊಳಪಡಿಸಿದ್ದು, ನೀರು ಕುಡಿಯಲು ಯೋಗ್ಯವಾಗಿರುವುದಾಗಿ ವರದಿ ಬಂದಿದೆ.
ಪ್ರಕರಣದ ತೀವ್ರತೆ ಅರಿತ ಡಿಸಿ ಡಾ.ಕುಮಾರ ನೇತೃತ್ವದಲ್ಲಿ ಜಿಲ್ಲಾಡಳಿತ, ಶಾಸಕ ಎಚ್.ಟಿ.ಮಂಜು ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್ ವೈರಲ್ ಡಯೇರಿಯಾ ನಿಯಂತ್ರಣಕ್ಕೆ ಶ್ರಮಿಸಿದ್ದಾರೆ.