

ಆಲೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಚ್ ತಿಂಗಳಿನಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರ ಆಹಾರ ಧಾನ್ಯ ಹಂಚಿಕೆ ಪ್ರಮಾಣ ಬಿಡುಗಡೆ ಮಾಡಲಾಗಿದೆ.
ಏಕ ಸದಸ್ಯ, ದ್ವಿ ಸದಸ್ಯ ಮತ್ತು ತ್ರಿ ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗೆ 35 ಕೆ.ಜಿ.(ಪ್ರತಿ ಕಾರ್ಡ್‌ಗೆ), ನಾಲ್ವರು ಸದಸ್ಯರಿಗೆ 45 ಕೆ.ಜಿ., ಐವರು ಸದಸ್ಯರಿದ್ದರೆ 65ಕೆಜಿ, ಆರು ಸದಸ್ಯರಿಗೆ 85 ಕೆ.ಜಿ., ಏಳು ಸದಸ್ಯರಿಗೆ 105 ಕೆ.ಜಿ. , 8 ಸದಸ್ಯರಿದ್ದರೆ 125 ಕೆಜಿ, ಹತ್ತು ಸದಸ್ಯರಿದ್ದರೆ 185 ಕೆ.ಜಿ., 12 ಸದಸ್ಯರಿರುವ ಪ್ರತಿ ಕಾರ್ಡ್‌ಗೆ 205 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.
ಬಿಪಿಎಲ್(ಪಿಎಚ್‌ಎಚ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 15 ಕೆ.ಜಿ. ಪಡಿತರ ಉಚಿತವಾಗಿ ವಿತರಿಸಲಾಗುವುದು. ಕಡಿಮೆ ಪಡಿತರ ವಿತರಣೆ ಮಾಡಿದ್ದಲ್ಲಿ ಆಹಾರ ಇಲಾಖೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ದೂರನ್ನು ಸಲ್ಲಿಸುವಂತೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.