ಕಾರ್ಮಿಕ ಸಂಘಟನೆಗಳ ಸದಸ್ಯರ ಮೆರವಣಿಗೆ

HUN-MAY-1-5(CITU PROCESSION)
ಹುಣಸೂರಿನಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ವತಿಯಿಂದ ಮೆರವಣಿಗೆ ನಡಸಲಾಯಿತು. ಪುಷ್ಪಾ, ಮಂಗಳಾ ಗೌರಮ್ಮ, ಜಾನಕಮ್ಮ, ಬಸವರಾಜ್, ಜಗದೀಶ್ ಸೂರ್ಯ ಇತರರು ಇದ್ದರು.
Published on

ಹುಣಸೂರು: ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳ ಸದಸ್ಯರು ಗುರುವಾರ ಮೆರವಣಿಗೆ ನಡೆಸಿದರು.

ಸಂವಿಧಾನ ವೃತ್ತದಲ್ಲಿ ಜಮಾಯಿಸಿದ ಸಿಐಟಿಯು ಕಾರ್ಯಕರ್ತರು ಸಿಐಟಿ ಜಿಂದಾಬಾದ್, ಕಾರ್ಮಿಕ ಕಾನೂನುಗಳ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ, ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನ 31 ಸಾವಿರ ರೂ. ಜಾರಿ ಮಾಡಲೇಬೇಕು ಮುಂತಾದ ಘೋಷಣೆ ಕೂಗುತ್ತ ಕೆಂಪು ಬಾವುಟ ಹಿಡಿದು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ನಂತರ ನಡೆದ ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್‌ಸೂರ್ಯ ಮಾತನಾಡಿ, ಕಾರ್ಮಿಕರು ತ್ಯಾಗ, ಬಲಿದಾನಗಳಿಂದ ಪಡೆದ ಹಕ್ಕುಗಳನ್ನು ಆಳುವ ಸರ್ಕಾರಗಳು ದಮನ ಮಾಡಲು ಹೊರಟಿವೆ. ಕಾರ್ಮಿಕರ ಹೋರಾಟಕ್ಕೆ ಸಜ್ಜಾಗಬೇಕೆಂದು ಕರೆ ನೀಡಿದರು.

ಎಲ್ಲ ವಲಯದಲ್ಲೂ ಕಾರ್ಮಿಕರಿಗೆ ಭದ್ರತೆ ಮತ್ತು ಕನಿಷ್ಠ ವೇತನ ಇಲ್ಲದೆ ದುಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಭಾಗವಾಗಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ತಾಲೂಕು ಸಂಚಾಲಕ ವಿ.ಬಸವರಾಜು ಕಲ್ಕುಣಿಕೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕರ ವಿರೋಧಿ ನೀತಿಯಿಂದಾಗಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಅಭದ್ರತೆಯಲ್ಲಿ ದುಡಿಯುವಂತಾಗಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಲಕ್ಷಣ ಕಾಣುತ್ತಿವೆ. ಇದರ ಭಾಗವಾಗಿ ಮುಂಬರುವ ಮೇ 20 ರಂದು ಅಖಿಲ ಭಾರತ ಮಟ್ಟದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿವೆ. ತಾಲೂಕಿನಲ್ಲೂ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮೆರವಣಿಗೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪುಷ್ಪಾ, ತಾಲೂಕ ಅಧ್ಯಕ್ಷೆ ಮಂಗಳಾ ಗೌರಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಚಂದ್ರಶೇಖರ್, ಪಂಚಾಯಿತಿ ನೌಕರ ಸಂಘದ ಲೋಕೇಶ್, ದಿನೇಶ್, ರವಿಕುಮಾರ್, ಬಿಸಿಯೂಟ ನೌಕರರ ಸಂಘದ ಮಂಜುಳಾ, ಮುಖಂಡರಾದ ತಮ್ಮಡಹಳ್ಳಿ ಮಹದೇವ, ಬನ್ನಿಕುಪ್ಪೆ ಮಹದೇವ, ಕೆಪಿಆರ್‌ಎಸ್‌ನ ಗೋಪಾಲ್, ಜಾನಕಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net