

ಮುಳಬಾಗಿಲು: ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಲಭ್ಯಗಳು ಸೇರಿ ಶುದ್ಧ ಕುಡಿಯುವ ನೀರು ನೀಡಲು ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬರುತ್ತಿದ್ದರೂ, ಸೌಲಭ್ಯ ಮಾತ್ರ ಮರಿಚಿಕೆಯಾಗಿ ಉಳಿದಿದೆ ಎಂಬುದಕ್ಕೆ ತಾಲೂಕಿನ ಚಲ್ಲಪಲ್ಲಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕ ಸಾಕ್ಷಿ.
ಲಕ್ಷಾಂತರ ರೂ.ವೆಚ್ಚದಲ್ಲಿ ಚಲ್ಲಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸಾಪನೆ ಮಾಡಿದ್ದು, ಈಗ ಇದು ಇದ್ದರೂ ಸಹ ಯಾರಿಗೂ ಪ್ರಯೋಜನಕ್ಕೆ ಬಾರದಂತಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಿ ಗ್ರಾಮಸ್ಥರಿಗೆ ಕುಡಿಯಲು ಯೋಗ್ಯ ನೀರನ್ನು ಪೂರೈಕೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಲ್ಲಪಲ್ಲಿ ಗ್ರಾಮದಲ್ಲಿ ಸುಮಾರು 109 ಮನೆಗಳಿದ್ದು, 400 ಜನಸಂಖ್ಯೆ ಇದೆ. ಅಲ್ಲದೆ ಪಾಲೂರಹಳ್ಳಿ, ಚಾಪೂರಹಳ್ಳಿ, ಮಚ್ಚನಹಳ್ಳಿ ಗ್ರಾಮಗಳೂ ಸಹ ಈ ಗ್ರಾಮಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಜನರು ಸಹ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವಲಂಬಿಸಿದ್ದಾರೆ. ಇದರಿಂದಾಗಿ ಈ ಎಲ್ಲ ಗ್ರಾಮಗಳಿಗೂ ಸಹ ಶುದ್ಧ ನೀರು ಸಿಗದೆ ಹೆಚ್ಚುವರಿ ಹಣ ನೀಡಿ ಖಾಸಗಿ ಅವರಿಂದ ನೀರನ್ನು ತರಿಸಿಕೊಳ್ಳಲಾಗುತ್ತದೆ.
ಹವಾಮಾನ ವೈಪರಿತದಿಂದ ನೆಗಡಿ, ಕೆಮ್ಮು, ಜ್ವರ ಮೊದಲಾದ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಶುದ್ಧ ಕುಡಿಯುವ ನೀರಿಲ್ಲದೆ ಮತ್ತಷ್ಟು ರೋಗ ರುಜಿನಗಳು ಹರಡುವ ಸಂಭವ ಇದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ನೀರಿನ ಘಟಕ ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ 4 ವರ್ಷಗಳ ಹಿಂದೆ ನಿಮಾರ್ಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳ ನೀಡಿದ್ದು, ಅಂದಿನಿಂದ ಇದುವರೆಗೂ ಕೆಲವೇ ದಿನಗಳು ಶುದ್ಧ ನೀರು ಬಂದಿದೆ. ಇಲ್ಲಿನ ಯಂತ್ರಗಳು ಕೆಟ್ಟು ನಿಂತಿವೆ, ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಅದಕ್ಕೆ ನಮಗೆ ಸಂಬಂಧವಿಲ್ಲ ಎಂದು ಹೇಳುತ್ತಾರೆ, ಇದರಿಂದ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವವರು ಯಾರು?.
- ಕೃಷ್ಣಾರೆಡ್ಡಿ
ಚಲ್ಲಪಲ್ಲಿ ಗ್ರಾಮಸ್ಥ
ಶುದ್ಧ ನೀರಿನ ಘಟಕವನ್ನು ಖಾಸಗಿ ಏಜೆನ್ಸಿ ಮೂಲಕ ಗ್ರಾಮೀಣ ಶುದ್ಧ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಲಾಗಿದ್ದು, ಇದುವರೆಗೂ ಗ್ರಾಪಂಗೆ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಸಂಬಂಧಿಸಿದ ಏಜೆನ್ಸಿ ಅವರಿಗೆ ಮತ್ತು ಎಇಇ ಅವರಿಗೆ ಮಾಹಿತಿ ನೀಡಲಾಗಿದ್ದು, ಬೇಗ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
- ರಮಣಪ್ಪ
ಗ್ರಾಪಂ ಅಭಿವೃದ್ಧಿ ಅಧಿಕಾರಿ, ಪಿಚ್ಚಗುಂಟ್ಲಹಳ್ಳಿ