ರಾಯಣ್ಣನ ಪ್ರತಿಮೆ ಸ್ಥಾಪನೆ ಆಗ್ರಹಿಸಿ ೨೫ಕ್ಕೆ ಮೆರವಣಿಗೆ

21 smg Manjunath
ವಾಟಾಳ್ ಮಂಜುನಾಥ್
Published on

ಶಿವಮೊಗ್ಗ: ರೈಲ್ವೆ ನಿಲ್ದಾಣ ಸಮೀಪದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯಿಂದ ಜು.25ರಂದು ಬೆಳಗೆ 10ಕ್ಕೆ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಽಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ತಿಳಿಸಿದರು.

ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ಸಿಟಿಯವರು ಕೆಲ ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕತ್ತಿ, ಗುರಾಣಿ ಪ್ರತಿಕೃತಿ ಇಟ್ಟಿದ್ದು, ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಆದ್ದರಿಂದ ಈ ಕತ್ತಿ ಗುರಾಣಿ ತೆರವುಗೊಳಿಸಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದಲ್ಲಿ ನಾಡಿನ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಮಹಾನ್ ವೀರ ಸೇನಾನಿ. ಆತನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ. ಮೆರವಣಿಗೆಯಲ್ಲಿ ಸುಮಾರು 500ಕ್ಕೂ ಅಽಕ ಕಾರ್ಯಕರ್ತರು ಭಾಗವಹಿಸುವರು. ಈ ಹೋರಾಟಕ್ಕೆ ರೈತ, ದಲಿತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು, ಕುರುಬ ಸಮುದಾಯದ ವಿವಿಧ ಘಟಕಗಳು ಬೆಂಬಲ ನೀಡುತ್ತಿವೆ ಎಂದರು.
ವೇದಿಕೆ ಮುಖಂಡ ಗಣೇಶ್ ಬಿಳಗಿ ಮಾತನಾಡಿ, ನಾಡಿನ ಉಳಿವಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನವಾದ ಆ.೧೫ರಂದು ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಭಾವಚಿತ್ರ ಇಟ್ಟು ಗೌರವ ಸಲ್ಲಿಸಬೇಕು ಎಂದರು.
ರೈತ ಮುಖಂಡ ವಸಂತಕುಮಾರ್, ಲಿಂಗರಾಜ್, ಲೊಕೇಶ್, ನಾಗರಾಜ್, ಅಕ್ಬರ್ ಪಾಶಾ, ನವುಲೆ ಮಂಜು, ಅರ್ಚನಾ ನಿರಂಜನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net