

ಮಂಡ್ಯ: ಸಮ್ಮೇಳನ ಹಿನ್ನೆಲೆಯಲ್ಲಿ ಮೆರವಣಿಗೆ ಸಮಿತಿಯಡಿ ರಚಿಸಿರುವ ಉಪ ಸಮಿತಿಗಳು ತಮ್ಮ ವ್ಯಾಪ್ತಿಯ ಕಾರ್ಯ ಚಟುವಟಿಕೆ, ಅಂದಾಜು ವೆಚ್ಚದ ಮಾಹಿತಿಯೊಂದಿಗೆ ಸ್ಪಷ್ಟ ಅಭಿಪ್ರಾಯ/ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸುವಂತೆ ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮೆರವಣಿಗೆ ಸಮಿತಿ ಹಾಗೂ ಉಪ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಪ ಸಮಿತಿಗಳು ಯುಕ್ತವೆಂದು ತೋರಬಹುದಾದಂತಹ ಚಟುವಟಿಕೆಯನ್ನು ಗುರುತಿಸಿ, ಅಂದಾಜು ವೆಚ್ಚ ಒಳಗೊಂಡ ವರದಿಯನ್ನು ಮಂಡಿಸಬೇಕು. ಬಳಿಕ ಅಭಿಪ್ರಾಯ ಮತ್ತು ಶಿಫಾರಸನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದು ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಸಂಭ್ರಮ. ಹಾಗಾಗಿ, ಸಮ್ಮೇಳನವು ಪಕ್ಷಾತೀತ ಮತ್ತು ಜಾತ್ಯಾತೀತವಾಗಿದೆ. ಎಲ್ಲರನ್ನೂ ಒಳಗೊಳ್ಳುವಂತೆ ಇರಬೇಕು. ಕಲಾತಂಡಗಳ ಆಯ್ಕೆ, ಸ್ತಬ್ಧಚಿತ್ರಗಳ ನಿರ್ಮಾಣ ಸೇರಿದಂತೆ ಪ್ರತಿ ಹಂತದಲ್ಲೂ ಇದು ಅನ್ವಯವಾಗಬೇಕು. ಎಲ್ಲೂ ಕೂಡ ಅಪಸ್ವರ ಕೇಳಿಬರಬಾರದು. ಈ ಬಗ್ಗೆ ಉಪ ಸಮಿತಿಗಳು ಎಚ್ಚರವಹಿಸಬೇಕು. ಜಿಲ್ಲೆಯಲ್ಲಿ ಸಮ್ಮೇಳನದ ಸಡಗರವಿದ್ದರೂ ಮೊದಲ ದಿನ ಮೆರವಣಿಗೆ ಬೆಳಿಗ್ಗೆಯೇ ಆರಂಭವಾಗುವುದರಿಂದ ಜನರ ಭಾಗವಹಿಸುವಿಕೆ ನಿರೀಕ್ಷಿಸಿದಕ್ಕಿಂತ ಕಡಿಮೆ ಬರಬಹುದು. ಹಾಗಾಗಿ, ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಆಗಬೇಕು. ಈ ನಿಟ್ಟಿನಲ್ಲಿಯೂ ಉಪ ಸಮಿತಿಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಮೆರವಣಿಗೆ ಸಮಿತಿ ಉಪಾಧ್ಯಕ್ಷ ಡಿ.ಪಿ.ಸ್ವಾಮಿ, ಸಂಚಾಲಕ ಕಾರಸವಾಡಿ ಮಹದೇವು, ಸದಸ್ಯ ಕಾರ್ಯದರ್ಶಿಯೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್ ಇತರರಿದ್ದರು.