

ಬಾದಾಮಿ: ಜನವಿರೋಧಿ ನೀತಿಗಳಿಂದ ರಾಜ್ಯದ ಜನರ ಮೇಲೆ ಬೆಲೆ ಏರಿಕೆಯಂತಹ ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಏ.17ರಂದು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಜನಾಕ್ರೋಶ ರ‌್ಯಾಲಿ ಜರುಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದ ಕಾನಿಪ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರಿಗೆ ಗ್ಯಾರಂಟಿ ನೀಡುವ ನೆಪದಲ್ಲಿ ಬೆಲೆ ಏರಿಕೆಯ ಆರ್ಥಿಕ ಹೊರೆ ಹೇರಿದೆ. ಇದರಿಂದ ಬೇಸತ್ತಿರುವ ಜನರು ಜನಾಕ್ರೋಶ ರ‌್ಯಾಲಿಗೆ ಕೈ ಜೋಡಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ರ‌್ಯಾಲಿಯಲ್ಲಿ 15 ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿದ್ದು, ಅಂಬೇಡ್ಕರ್ ಪುತ್ಥಳಿಗೆ ಮಾಲರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಗುವುದು. ರ‌್ಯಾಲಿ ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಡಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿ.ಪ. ನಾಯಕ ಚಲವಾದಿ ನಾರಾಯಣಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಲಿದ್ದು, ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಂಸದರು, ವಿ.ಪ. ಸದಸ್ಯರ ಭಾಗವಹಿಸಲಿದ್ದಾರೆ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿ, ಜನರ ತೆರಿಗೆ ಹಣವನ್ನು ದುಪ್ಪಟ್ಟು ಮಾಡಿ ಅದರಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇಲ್ಲ. ಪ.ಜಾ, ಪ.ಪಂ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸಂಬಂಧಿಸಿದ ಸಚಿವರು ಜೈಲಿಗೆ ಹೋಗಿ ಬಂದಿದ್ದರು ಕೂಡಾ ನಾಚಿಕೆ ಇಲ್ಲ ಎಂದು ದೂರಿದರು.
ಅಲ್ಪಸಂಖ್ಯಾತರ ತುಷ್ಟೀಕರಣ ಹೆಸರಿನಲ್ಲಿ ಕೇವಲ ಒಂದು ಕೋಮಿಗೆ ಮೀಸಲಾಗುವ ತುಷ್ಟೀಕರಣದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ ಈ ರೀತಿ ಮಾಡುವುದರಿಂದ ರಾಜ್ಯದ ಜನರಲ್ಲಿ ಭಾವನೆಗಳನ್ನು ಕೆರಳಿಸಿದಂತಾಗುತ್ತದೆ ಎಂದರು.
ಪಿಕಾರ್ಡ ಬ್ಯಾಂಕ ಅಧ್ಯಕ್ಷ ಮಹಾಂತೇಶ ಮಮದಾಪೂರ, ಮಂಡಲ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿದರು. ಶಿವನಗೌಡ ಸುಂಕದ, ಎ್.ಆರ್. ಪಾಟೀಲ, ಮುತ್ತು ಉಳ್ಳಾಗಡ್ಡಿ, ಹೊನ್ನಯ್ಯ ಹಿರೇಮಠ, ಪ್ರಮೋದ ಕವಡಿಮಟ್ಟಿ, ಮಾಗುಂಡಪ್ಪ ನೋಟಗಾರ, ಕೆ.ಡಿ.ಜ್ಯೋತಿ, ಬೇಲೂರಪ್ಪ ವಡ್ಡರ, ರಾಘು ದಾಯಪೂಲೆ ಮತ್ತಿತರರಿದ್ದರು.