

ಮಂಗಳೂರು: ಇತಿಹಾಸ ಪ್ರಸಿದ್ಧ ಕಾವೂರು ಶ್ರೀ ಮಹಾಲಿಂಗೇಶ್ವರನ ದೇವಸ್ಥಾನದಲ್ಲಿ ಮಾ.1ರಿಂದ 9ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಸಿದ್ಧತೆಗಳು ಅಂತಿಮ ಹಂತದಲ್ಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
ಶ್ರೀ ಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.6ರಂದು ಬೆಳಗ್ಗೆ ಗಂಟೆ 11ರಿಂದ 12ರವರೆಗೆ ನವೀಕೃತ ಗರ್ಭಗೃಹದಲ್ಲಿ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಮಾ. 9ರಂದು ಬೆಳಗ್ಗೆ 8.10ರಿಂದ 8.40ರ ಮೀನಲಗ್ನ ಸುಮುಹೂರ್ತದಲ್ಲಿ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕವು ಜರುಗಲಿದೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಜತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಊರಿನ ಜನರು ಪ್ರಾಕೃತಿಕ ವಿಕೋಪ ಮತ್ತು ಸಂಕಷ್ಟಗಳಿಂದ ಮುಕ್ತವಾಗಿ ನೆಮ್ಮದಿಯ ಜೀವನವನ್ನು ನಡೆಸಲು ನಮ್ಮ ದೇವಸ್ಥಾನ, ದೈವಸ್ಥಾನ ಹಾಗೂ ಆರಾಧನಾ ಕೇಂದ್ರಗಳಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪುಣ್ಯಕಾರ್ಯಗಳು ಕಾರಣೀಭೂತವಾಗಿವೆ. ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುವ ಪುಣ್ಯ ಕ್ಷೇತ್ರ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 800 ವರ್ಷಕ್ಕೂ ಮಿಕ್ಕಿದ ಇತಿಹಾಸವಿದೆ. ಕಾವೂರು, ಬಂಗ್ರಕೂಳೂರು, ಪಂಜಿಮೊಗರು, ಪಡುಕೋಡಿ, ಕುಂಜತ್ತಬೈಲ್, ಮರಕಡ, ಪಡುಶೆಡ್ಡೆ- ಜಾರ ಎಂಬ ಏಳು ಗ್ರಾಮಗಳಿಗೆ ಮಾಗಣೆ ದೇವಾಲಯವಾಗಿರುವ ಈ ದೇವಸ್ಥಾನವು 1982ರಲ್ಲಿ ಜೀರ್ಣೋದ್ಧಾರಗೊಂಡಿರುತ್ತದೆ. 1996ರಲ್ಲಿ ಕ್ಷೇತ್ರದಲ್ಲಿ ನೂತನ ಕಲ್ಯಾಣ ಮಂಟಪ, ವಸಂತ ಮಂಟಪ, 2004ರಲ್ಲಿ ಬ್ರಹ್ಮರಥ, ಜಳಕದ ಕೆರೆ, 2009ರಲ್ಲಿ ಸುತ್ತು ಪೌಳಿ, ಏಕಶಿಲಾ ಧ್ವಜಸ್ತಂಭ ನಿರ್ಮಾಣಗೊಂಡಿರುತ್ತದೆ. ಈ ಬಾರಿ ಗರ್ಭಗುಡಿಯ ಜೀರ್ಣೋದ್ಧಾರ, ಪಾಕಶಾಲೆ, ಅನ್ನಛತ್ರ, ಸಭಾಭವನಗಳ ನಿರ್ಮಾಣವಾಗಿದೆ ಎಂದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ರಮಾನಂದ ಭಂಡಾರಿ ಮಾತನಾಡಿ ಮಾ.2ರಂದು ಕೂಳೂರು, ಪಡುಕೋಡಿ, ಶಾಂತಿನಗರ, ಗಾಂಧಿನಗರ, ಅತ್ರಬೈಲು, ಕುಂಜತ್ತಬೈಲು, ಮರಕಡ, ಕಾವೂರು, ಪಡುಶೆಡ್ಡೆ ಜಾರ, ಬೋಂದೇಲ್, ಪಚ್ಚನಾಡಿ, ಪದವಿನಂಗಡಿ, ಮೇರಿಹಿಲ್, ಕೊಂಚಾಡಿ, ಮುಗ್ರೋಡಿ ವ್ಯಾಪ್ತಿಯ ಹಸಿರುವಾಣಿ ಹೊರೆಕಾಣಿಕೆ ಸಂಜೆ 4 ಗಂಟೆಗೆ ಬೋಂದೆಲ್ ಕೆಎಚ್‌ಬಿ ಕಾಲೋನಿ ಮೈದಾನದಿಂದ ಹೊರಡಲಿದೆ. ಮಾ.7ರಂದು ಆಕಾಶಭವನ, ದೇರೆಬೈಲು, ಕೊಂಚಾಡಿ, ಮಾಲಾಡಿ ವ್ಯಾಪ್ತಿಯ ಹಸಿರುವಾಣಿ ಹೊರೆ ಕಾಣಿಕೆ ಸಂಜೆ 4.30ಕ್ಕೆ ಮಾಲಾಡಿ ಶ್ರೀ ಜಾರಂದಾಯ ದೈವಸ್ಥಾನ ವಠಾರದಿಂದ ಹೊರಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್, ದೇವಳದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಅವಿನಾಶ್ ನಾಯ್ಕ ಪಂಜಿಮುಗೇರುಗುತ್ತು, ದೀಪಕ್ ಪೂಜಾರಿ, ಹರೀಶ್ ಶೆಟ್ಟಿ, ಸದಾಶಿವ ಶೆಟ್ಟಿ, ಗಿರಿಜಾತೆ ಆರ್. ಭಂಡಾರಿ, ಪುರುಷೋತ್ತಮ, ಕಿಶೋರ್ ರೈ ಮೊದಲಾದವರು ಉಪಸ್ಥಿತರಿದ್ದರು.