

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳಕ್ಕೆ ತೆರಳುವ ಮರವೂರು ಸೇತುವೆ ಮಂಗಳವಾರ ಬೆಳಗ್ಗಿನ ಜಾವ ಎರಡು ಕಾಲು ಅಡಿ ಕುಸಿತವಾಗಿದ್ದು, ಇದರ ದುರಸ್ತಿ ಕಾರ್ಯ ಒಂದು ತಿಂಗಳೊಳಗೆ ಪೂರ್ಣಗೊಳಿಸುವ ವಿಶ್ವಾಸವನ್ನು ತಜ್ಞರ ತಂಡ ವ್ಯಕ್ತಪಡಿಸಿದೆ.
ರಾಜ್ಯ ಹೆದ್ದಾರಿ 67ರ ಮಂಗಳೂರು- ಬಜಪೆ- ಕಟೀಲು- ಕಿನ್ನಿಗೋಳಿ ಸಂಪರ್ಕ ರಸ್ತೆ ಇದಾಗಿದ್ದು, ಫಲ್ಗುಣಿ ನದಿಗೆ ಅಡ್ಡವಾಗಿ 53 ವರ್ಷಗಳ ಹಿಂದೆ ಈ ಸೇತುವೆ ನಿರ್ಮಿಸಲಾಗಿತ್ತು. ಬಜ್ಪೆಯಿಂದ ಮಂಗಳೂರು ಕಡೆ ಬರುವಾಗ ಸೇತುವೆಯ ಮೊದಲ ಎರಡು ಅಂಕಣ ಸುಮಾರು ಎರಡು ಕಾಲು ಅಡಿ ಕೆಳಗೆ ಕುಸಿದಿದೆ.
ಜಿಲ್ಲಾಡಳಿತದ ಆಹ್ವಾನದಂತೆ ಬೆಂಗಳೂರು ಮೂಲದ ಇಂಜಿನಿಯರ್, ಸ್ಟ್ರಕ್ಟ್ ಜಿಯೋಟೆಕ್ ರಿಸರ್ಚ್ ಲ್ಯಾಬೋರೇಟರಿಸ್ ಸಂಸ್ಥೆಯ ಆಡಳಿತ ನಿರ್ದೇಶಕ ಆರ್.ಕೆ.ಜಯಗೋಪಾಲ್ ನೇತೃತ್ವದ ತಂಡ ಸೇತುವೆ ಕುಸಿತ ಪ್ರದೇಶಕ್ಕೆ ಗುರುವಾರ ತೆರಳಿ ಪರಿಶೀಲನೆ ನಡೆಸಿದೆ.
ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಬಿ.ಟಿ.ಕಾಂತರಾಜು, ಸೂಪರಿಂಡೆಂಟ್ ಇಂಜಿನಿಯರ್ ಗಣೇಶ್, ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು.
2 ದಿನದೊಳಗೆ ಯೋಜನೆ ಸಿದ್ಧ: ಮರವೂರು ಸೇತುವೆ ದುರಸ್ತಿಗೆ ಸಂಪೂರ್ಣ ಯೋಜನೆ 2 ದಿನದೊಳಗೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸುವುದಾಗಿ ಹಿರಿಯ ಇಂಜಿನಿಯರ್ ಜಯ ಗೋಪಾಲ್ ತಿಳಿಸಿದ್ದಾರೆ. ಆ ಬಳಿಕ ದುರಸ್ತಿ ತಾಂತ್ರಿಕ ಕೆಲಸಗಳು ಆರಂಭವಾಗಲಿವೆ. ಮೂಲಗಳ ಪ್ರಕಾರ, ಸೇತುವೆಯನ್ನು ಜಾಕ್ ಮೂಲಕ ಸುಸ್ಥಿಗೆ ತಂದು, ಕುಸಿದ ಪಿಲ್ಲರನ್ನು ಗಟ್ಟಿಗೊಳಿಸುವ ಕೆಲಸ ನಡೆಯಲಿದೆ. ಈಗಾಗಲೇ ಕೇರಳ ಮೂಲದ ನೌಷಾದ್ ನೇತೃತ್ವದ ತಂಡ ಸೇತುವೆ ದುರಸ್ತಿ ಕಾರ್ಯದ ಪ್ಲಾಟ್‌ಫಾರ್ಮ್ ಕೆಲಸ ಆರಂಭಿಸಿದ್ದು, 25ರಿಂದ 30 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದೆ. ದುರಸ್ತಿ ಬಳಿಕ ಲಘುವಾಹನ, ಬಸ್‌ಗಳಿಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಲಾರಿ, ಬೃಹತ್ ಗಾತ್ರದ ವಾಹನಗಳಿಗೆ ಸಂಚಾರಕ್ಕೆ ಅನುಮತಿ ಸಿಗುವುದು ಅನುಮಾನ.