

ಗುರುಪುರ: ಬಿರುಕು ಬಿಟ್ಟು ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುವ ಮರವೂರು ಹಳೇ ಸೇತುವೆ ಅಡಿಭಾಗದಲ್ಲಿ ಮಳೆ, ಪ್ರವಾಹ ಲೆಕ್ಕಿಸದೆ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ.
ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಫಲ್ಗುಣಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಾಗಿದೆ. ಸೇತುವೆ ಬಿರುಕು ಬಿಟ್ಟಿರುವ ಪಿಲ್ಲರ್ ಭಾಗದಲ್ಲಿ ನದಿ ತಳದಿಂದ ಸೇತುವೆಯ ಮೇಲ್ಭಾಗದವರೆಗೆ ಕಬ್ಬಿಣದ ಸಲಾಕೆಗಳಿಂದ ಅಟ್ಟಳಿಕೆಯಿಂದ(ಜ್ಯಾಕ್ ಮಾದರಿಯಲ್ಲಿ) ಆಧಾರ ಕೊಡಲಾಗುತ್ತಿದೆ. ಈ ಕೆಲಸ ಸಂದರ್ಭ ಕಾರ್ಮಿಕರು ನದಿ ನೀರಲ್ಲೇ ಕೆಲಸ ಮುಂದುವರಿಸಿದ್ದಾರೆ. ಸೇತುವೆಯ ಮತ್ತೊಂದು ಕಡೆ ಬಂಡೆ ಕಲ್ಲುಗಳ ಆಧಾರ ಕಲ್ಪಿಸಲಾಗಿದೆ.
ಗಡುವಿನಂತೆ ಜುಲೈ ಅಂತ್ಯದೊಳಗೆ ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಲಘು ವಾಹನಗಳು ಸಂಚರಿಸುವ ಸಾಧ್ಯತೆ ಇದೆ. ಅಲ್ಲೇ ಹತ್ತಿರದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿರುವ ಕಾವೂರು ಮೊಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯೇ ಮರವೂರು ಹಳೇ ಸೇತುವೆ ದುರಸ್ತಿ ಕಾಮಗಾರಿ ಕೈಗೊಂಡಿದೆ.
ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಇಲ್ಲಿಗೆ ಭೇಟಿ ನೀಡಿದ ಬೆಂಗಳೂರಿನ ಸೇತುವೆ ಸಾಮರ್ಥ್ಯ ಪರಿಶೀಲನಾ ವಿಶೇಷಜ್ಞರು ಮತ್ತು ತಂತ್ರಜ್ಞರ ತಂಡ ನೀಡಿದ ನಿರ್ದೇಶನದಂತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಸೇತುವೆಯಲ್ಲಿ ವಾಹನ ನಿರ್ಬಂಧಿಸಿದ ಬಳಿಕ ಮಂಗಳೂರು-ಬಜ್ಪೆ, ವಿಮಾನ ನಿಲ್ದಾಣ, ಕಟೀಲು ಭಾಗಕ್ಕೆ ವಾಹನಗಳು ಸುತ್ತಿ ಬಳಸಿ ಸಂಚರಿಸುವಂತಾಗಿದೆ.
ಇದೇ ವೇಗದಲ್ಲಿ ಕಾಮಗಾರಿ ನಡೆದಲ್ಲಿ ಗಡುವಿನೊಳಗೆ ಮರವೂರು ಹಳೇ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನದ ಮೂಲಕ ಸೇತುವೆಯ ಪಿಲ್ಲರ್ ಭದ್ರಗೊಳಿಸುವ ಕೆಲಸ ನಡೆಯುತ್ತಿದೆ. ಕ್ಯೂರಿಂಗ್ ಆಗಬೇಕಿದೆ. ತಂತ್ರಜ್ಞರಿಂದ ಮತ್ತೊಂದು ಬಾರಿ ಸಮೀಕ್ಷೆ ನಡೆಯಲಿದೆ. ಗಡುವಿನಂತೆ ಜುಲೈನಲ್ಲೇ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಲಿದೆ.
ಸುಬ್ರಹ್ಮಣ್ಯ ಹಿರಿಯ ಇಂಜಿನಿಯರ್, ಮೊಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆ